ಮಂಗಳೂರು, ಮಾ 10: ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ ರೈಲಿನಲ್ಲಿ ತಪಾಸಣೆ ಬಿಗಿಗೊಳಿಸಿದ್ದು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹತ್ತು ಲಕ್ಷ ಮೌಲ್ಯದ 201 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ರಾಜ್ಯದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಚಿನ್ನ, ನಗದು, ಮತ್ತಿತರ ಬೆಲೆಬಾಳುವ ವಸ್ತುಗಳು ರೈಲಿನ ಮೂಲಕ ಆ ರಾಜ್ಯಕ್ಕೆ ಕಳ್ಳಸಾಗಣೆಯಾಗುವುದನ್ನು ತಪ್ಪಿಸಲು ಆರ್‌ಪಿಎಫ್ ಸಿಬ್ಬಂದಿಯು ರೈಲುಗಳಲ್ಲಿ ತಪಾಸಣಾ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸ್ಮಾರ್ಟ್‌ಫೋನ್‌ಗಳಿದ್ದ ಬ್ಯಾಗ್ ಈ ತಪಾಸಣೆ ವೇಳೆ ಪತ್ತೆಯಾಗಿದೆ.
ಮಾರ್ಚ್ 9ರಂದು ಮುಂಜಾನೆ ಸುಮಾರು 3 ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಆಗಮಿಸಿದ ಜಾಮ್‌ನಗರ -ತಿರುನಲ್ವೇಲಿ ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ಕೈಗೊಳ್ಳಲಾಗಿದೆ. ರೈಲಿನ ಸಾಮಾನ್ಯ ಬೋಗಿಯ ಮೇಲಿನ ಲಗೇಜ್ ರಾಕ್‌ನಲ್ಲಿ ವಾರೀಸುದಾರರು ಇಲ್ಲದ ಮೂರು ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿದ್ದರು. ರೈಲಿನ ಸಾಮಾನ್ಯ ಬೋಗಿಯಲ್ಲಿ ಮೇಲುಗಡೆ ಲಗೇಜು ಇಡುವ ಸ್ಥಳದಲ್ಲಿ ವಾರಸುದಾರರು ಇಲ್ಲದ ಮೂರು ಬ್ಯಾಗ್‌ಗಳು ಇರುವುದನ್ನು ಸಿಬ್ಬಂದಿ ಗಮನಿಸಿದ್ದರು. ಸಂದೇಹದಿಂದ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಬೇರೆ ಬೇರೆ ಬ್ರ್ಯಾಂಡ್‌ಗಳ ಬಳಕೆಯಾದ 201 ಸ್ಮಾರ್ಟ್‌ಫೋನ್‌ಗಳು ಸಿಕ್ಕಿದ್ದವು. ವಶಪಡಿಸಿಕೊಂಡ ಸ್ಮಾರ್ಟ್‌ಫೋನ್‌ಗಳ ಮಹಜರನ್ನು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ನಡೆಸಲಾಗಿದೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರೈಲ್ವೆ ಇಲಾಖೆಯ ಪಾಲಕ್ಕಾಡ್ ವಿಭಾಗದ ಪ್ರಕಟಣೆ ತಿಳಿಸಿದೆ.
ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ದೇಹದಲ್ಲಿ ಧರಿಸಿದ್ದ ಕ್ಯಾಮೆರಾಗಳಲ್ಲಿ (ಬಾಡಿ ವೋರ್ನ್ ಕ್ಯಾಮೆರಾ) ದಾಖಲಾದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ಬೋಗಿಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸಿರುವುದು ಕಂಡುಬಂದಿದೆ. ಅಪರಾಧ ಗುಪ್ತವಾರ್ತೆ ಶಾಖೆ ಮತ್ತು ವಿಭಾಗೀಯ ಅಪರಾಧ ತಡೆ ಮತ್ತು ಪತ್ತೆ ದಳದ ನೆರವಿನೊಂದಿಗೆ ಈ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಸರ್ಕಾರದ ಜೊತೆಗೂ ಮಾಹಿತಿ ಹಂಚಿಕೊಳ್ಳಲಾಗಿದ್ದು, ರೈಲ್ವೆ ಪೊಲೀಸರು ಪ್ರಕರಣದ ತನಿಖೆಯನ್ನು ಹಾಗೂ ವಶಪಡಿಸಿಕೊಂಡ ಸ್ವತ್ತುಗಳ ಕುರಿತ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post