ಚೆನ್ನೈ : 1998 ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 58 ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಪ್ರಮುಖ ಆರೋಪಿ, ಉಗ್ರ ಸಾದಿಕ್‌ನನ್ನು ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ ತಿಳಿಸಿದೆ.
ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಜಂಟಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಉಗ್ರನನ್ನು ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ಎಟಿಎಸ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಆರೋಪಿಯ ವಿರುದ್ಧ ಕೋಮು ಗಲಭೆ, ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಿವೆ. ಈತ 1996 ರ ಬಳಿಕ ಅಂದರೆ 28 ವರ್ಷಗಳಿಂದ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ. ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದಾಗ್ಯೂ ಈತ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಅಜ್ಞಾತವಾಗಿ ವಾಸಿಸುತ್ತಿದ್ದ.
ಬಾಂಬ್ ಆರೋಪಿಗೆ ಹಲವು ಹೆಸರು : 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಸಾದಿಕ್ ರಾಜಾ, ಹಲವು ಹೆಸರು ಇಟ್ಟುಕೊಂಡಿದ್ದ. 48 ವರ್ಷದ ಈತ ಸಾದಿಕ್ ಅಲಿಯಾಸ್ ಸಿದ್ದಿಕಿ ಅಲಿಯಾಸ್ ರಾಜಾ ಅಲಿಯಾಸ್ ಟೈಲರ್ ರಾಜಾ ಅಲಿಯಾಸ್ ವಲರಂಥ ರಾಜಾ ಅಲಿಯಾಸ್ ಷಹಜಹಾನ್ ಅಬ್ದುಲ್ ಮಜಿದ್ ಮಕಾಂದರ್ ಅಲಿಯಾಸ್ ಷಹಜಹಾನ್ ಶೇಕ್ ಅಂತ ಬೇರೆ ಬೇರೆ ಹೆಸರು ಇಟ್ಟುಕೊಂಡು, ಬಾಂಬ್ ಬ್ಲಾಸ್ಟ್ ಬಳಿಕ ಬೇರೆ ಬೇರೆ ಕಡೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.
ಟೈಲರ್ ಕೆಲಸ ಮಾಡುತ್ತಲೇ ಉಗ್ರಗಾಮಿ ಚಟುವಟಿಕೆ : ಮೂಲತಃ ಕೊಯಂಬತ್ತೂರು ಜಿಲ್ಲೆಯ ಉಕ್ಕಡಂ ಎಂಬಲ್ಲಿನ ಬಿಲಾಲ್ ಎಸ್ಟೇಟ್ ನಿವಾಸಿಯಾಗಿರುವ ಅಬ್ದುಲ್ ಮಜೀದ್ ಮಕಂದರ್ ಸ್ವತಃ ಟೈಲರಿಂಗ್ ಮತ್ತು ಎಂಬ್ರಾಯ್ಡರಿ ಸ್ಪೆಷಲಿಸ್ಟ್ ಆಗಿದ್ದು, 1996-98ರ ಹೊತ್ತಿಗೆ ತನ್ನ ಊರಲ್ಲೇ ಟೈಲರ್ ಅಂಗಡಿ ಇಟ್ಟುಕೊಂಡಿದ್ದ. ಇದರ ನಡುವೆಯೇ ಅಲ್ ಉಮ್ಮಾ ಸಂಪರ್ಕಕ್ಕೆ ಬಂದು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ. ಅಲ್ಲಿರುವಾಗಲೇ ನಾನಾ ಹೆಸರುಗಳನ್ನು ಇಟ್ಟುಕೊಂಡಿದ್ದರೂ ಕೊಯಂಬತ್ತೂರಿನಲ್ಲಿ ಟೈಲರ್ ರಾಜ ಎಂದೇ ಫೇಮಸ್ ಆಗಿದ್ದ. ಪೊಲೀಸರ ಮಾಹಿತಿ ಪ್ರಕಾರ, ಸಾದಿಕ್, ವೇಲಾರಂತ ರಾಜ, ಶಹಜಾನ್ ಶೇಕ್, ಅಬ್ದುಲ್ ಮಜೀದ್ ಮಕಂದರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಟೈಲರ್ ಮತ್ತು ಎಂಬ್ರಾಯಿಡರಿ ಎಕ್ಸ್ ಪರ್ಟ್ ಆಗಿದ್ದ ಅಬ್ದುಲ್ ಮಜೀದ್ ಉಕ್ಕಡಮ್ ಬಳಿಯ ವಲ್ಲಾಲ್ ನಗರದಲ್ಲಿ ಬಾಡಿಗೆ ಶಾಪ್ ನಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದ. 1998ರ ಸೀರಿಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಕೆಯಾಗಿದ್ದ ಬಾಂಬುಗಳನ್ನು ಇದೇ ಅಂಗಡಿಯಲ್ಲಿ ಶೇಖರಣೆ ಮಾಡಿಟ್ಟಿದ್ದ ಎಂಬ ಆರೋಪ ಇದೆ.
ಸರಣಿ ಸ್ಫೋಟ ಪ್ರಕರಣದ ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದರಿಂದ ಟೈಲರ್ ರಾಜಾ ಅಲ್ಲಿಂದ ತಪ್ಪಿಸಿಕೊಂಡು ಆಂಧ್ರ, ಉತ್ತರ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ. ಆನಂತರ, ವಿಯಜಪುರದಲ್ಲಿ ಶಹಜಾನ್ ಹೆಸರಿನಲ್ಲಿ ಗುರುತಿಸಿಕೊಂಡು ತರಕಾರಿ ಮಾರುಕಟ್ಟೆಯಲ್ಲಿ ಮೂಟೆ ಹೊರುವ ಕಾರ್ಮಿಕನಾಗಿ ಸೇರಿಕೊಂಡಿದ್ದ. ಅಲ್ಲಿಯೇ ಯುವತಿಯೊಬ್ಬಳನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿದ್ದಾನೆ. ಇತ್ತೀಚೆಗೆ ಕೊಯಂಬತ್ತೂರು ತೆರಳಿದ್ದ ಶಹಜಾನ್, ತನ್ನ ಹಳೆಯ ಗೆಳೆಯರನ್ನು ಭೇಟಿಯಾಗಿ ಬಂದಿದ್ದ. ಆ ಗೆಳೆಯರ ಬಗ್ಗೆ ಪೊಲೀಸರು ಮೊದಲೇ ನಿಗಾ ಇಟ್ಟಿದ್ದರಿಂದ ಅಪರಿಚಿತ ವ್ಯಕ್ತಿ ಬಂದು ಭೇಟಿಯಾಗಿರುವುದು ಎಟಿಎಸ್ ತಂಡಕ್ಕೆ ಮಾಹಿತಿ ಹೋಗಿತ್ತು. ತಕ್ಷಣವೇ ಟ್ರ್ಯಾಕಿಂಗ್ ಮಾಡಿದ ಅಧಿಕಾರಿ ತಂಡ ಶಹಜಹಾನ್ ಅಲಿಯಾಸ್ ಟೈಲರ್ ರಾಜಾನನ್ನು ವಿಜಯಪುರದಲ್ಲಿ ಮೊನ್ನೆ ಜುಲೈ 8ರಂದು ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಎತ್ತಾಕ್ಕೊಂಡು ಹೋಗಿದೆ.
ಕೊಯಂಬತ್ತೂರು ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಇಬ್ಬರನ್ನು ಬಂಧಿಸಿದ್ದ ಎಟಿಎಸ್ ತಂಡಕ್ಕೆ ಇದೀಗ ಮೂರನೇ ಆರೋಪಿ ಬಲೆಗೆ ಬಿದ್ದಂತಾಗಿದೆ. ಇನ್ನಿಬ್ಬರು ಆರೋಪಿಗಳೆಂದು ಗುರುತಿಸಲ್ಪಟ್ಟ ಮುಜೀಬುರ್ ರೆಹ್ಮಾನ್ ಅಲಿಯಾಸ್ ಮುಜಿ ಮತ್ತು ಯೂಸುಫ್ ಎಂಬಿಬ್ಬರು 1998ರ ಫೆಬ್ರವರಿಯಿಂದಲೂ ತಲೆಮರೆಸಿಕೊಂಡಿದ್ದಾರೆ. ಟೈಲರ್ ರಾಜಾನನ್ನು ಎಟಿಎಸ್ ಪೊಲೀಸರು ಕೊಯಂಬತ್ತೂರಿಗೆ ಕರೆತಂದಿದ್ದು, ಪೊಲೀಸ್ ರಿಕ್ರೂಟ್ ಸ್ಕೂಲ್ ನಲ್ಲಿ ಇರಿಸಿ ವಿಚಾರಣೆ ನಡೆಸಿದ್ದಾರೆ. ಆನಂತರ, ಇಲ್ಲಿನ 5ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಜುಲೈ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆತನನ್ನು ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಎಟಿಎಸ್ ಮುಂದಾಗಿದೆ.
ಟೈಲರ್ ರಾಜಾ ವಿರುದ್ಧದ ಪ್ರಕರಣಗಳು: ಟೈಲರ್ ರಾಜಾ 1998 ರ ಕೊಯಮತ್ತೂರು ಸರಣಿ ಸ್ಫೋಟ, 1996 ರ ಜೈಲರ್ ಭೂಪಾಲನ್ ಮೇಲಿನ ಪೆಟ್ರೋಲ್ ಬಾಂಬ್ ದಾಳಿ, ಅದೇ ವರ್ಷ ನಾಗೂರ್‌ನಲ್ಲಿ ಸಯೀದಾ ಅವರ ಕೊಲೆ ಮತ್ತು 1997 ರ ಮಧುರೈ ಜೈಲು ಅಧಿಕಾರಿ ಜಯ ಪ್ರಕಾಶ್ ಅವರ ಕೊಲೆಯಲ್ಲಿ ಭಾಗಿಯಾದ ಆರೋಪಗಳಿವೆ.
ಬಾಂಬ್ ಸ್ಫೋಟದ ಕರಾಳತೆ: 1998ರ ಫೆಬ್ರವರಿ 14 ರಂದು ಕೊಯಮತ್ತೂರಿನ ಆರ್.ಎಸ್. ಪುರಂನಲ್ಲಿ ಬಿಜೆಪಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು. ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು. ಆ ಸಮಯದಲ್ಲಿ, ಸಾರ್ವಜನಿಕ ಸಭೆಯ ವೇದಿಕೆಯಿಂದ 100 ಮೀಟರ್ ದೂರದಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು. ಅಡ್ವಾಣಿ ಅವರು ಬರಬೇಕಿದ್ದ ವಿಮಾನ ವಿಳಂಬವಾದ ಕಾರಣ ಸ್ಫೋಟ ಘಟನೆಯಿಂದ ತಪ್ಪಿಕೊಂಡು ಬದುಕುಳಿದಿದ್ದರು. ನಂತರ ಕೊಯಮತ್ತೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದು, ಇದರಲ್ಲಿ 58 ಜನರು ಸಾವಿಗೀಡಾಗಿದ್ದರು. 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 188 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೊದಲ ಆರೋಪಿ ಅಲ್ ಉಮ್ಮಾ ಚಳವಳಿಯ ನಾಯಕ ಬಾಷಾ 25 ವರ್ಷಗಳ ಕಾಲ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಾರೋಗ್ಯದಿಂದ ನಿಧನರಾದರು.
Discover more from Coastal Times Kannada
Subscribe to get the latest posts sent to your email.
Discussion about this post