ಕಾರ್ಕಳ : ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವ ಕಾರ್ಕಳ ತಾಲ್ಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಬುಧವಾರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಂತೋಷ್ ರಾವ್ ಅವರ ತಂದೆ ನಿವೃತ್ತ ಶಿಕ್ಷಕರಾದ ಸುಧಾಕರ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುಧಾಕರ ಅವರಿಗೆ ತಲೆಗೂದಲು ಕ್ಷೌರ ಮಾಡಿಸಿ, ಹೊಸಬಟ್ಟೆ ತೊಡಿಸಿ ಪಾದಪೂಜೆ ಮಾಡಲಾಯಿತು. ಮನೆಗೆ ಸುಣ್ಣಬಣ್ಣ ಬಳಿಯಲಾಯಿತು.
ಬಳಿಕ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ‘ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಕುಟುಂಬ ಮಾನಸಿಕವಾಗಿ– ದೈಹಿಕವಾಗಿ ಬಹಳ ನೊಂದಿದೆ. ಕೊಲೆಗಾರ, ಅತ್ಯಾಚಾರಿ ಎಂಬ ಕಳಂಕದ ಕಾರಣಕ್ಕೆ ಸಂಬಂಧಗಳನ್ನು ಕಳೆದುಕೊಂಡಿದೆ. ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ಸಂತೋಷ್ ರಾವ್ ಕುಟುಂಬದ ಕ್ಷಮೆ ಕೇಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದರು.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಮತ್ತು ಸಮಾನ ಮನಸ್ಕರ ತಂಡ ಕಳೆದ ಮೂರು ದಿನಗಳಿಂದ ಸಂತೋಷ್ ರಾವ್ ಮನೆಯ ಧೂಳು ತೆಗೆಸಿ, ಸುಣ್ಣ-ಬಣ್ಣ ಬಳಿದು ಮನೆಯನ್ನು ಸುಸ್ಥಿತಿಗೆ ತಂದು ಮಾನವೀಯತೆ ಮೆರೆದರು.
ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟ ಬಳಿಕ, ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ರುವ ಸಂತೋಷ್ ರಾವ್ ಮನೆಯವರ ಕಡೆ ಸಂಬಂಧಿಕರೂ ಸೇರಿದಂತೆ ಗ್ರಾಮಸ್ಥರು ಕಾಲಿಡುತ್ತಿರಲಿಲ್ಲ. ಅಲ್ಲದೇ, ಮಗನ ಕೊರಗಿನಲ್ಲೇ ಸಂತೋಷ್ ತಾಯಿ ಕೂಡ 2016ರಲ್ಲಿ ನಿಧನ ಹೊಂದಿದ್ದರು. ತಾಯಿ ಹೋದ ನಂತರ ಸಂತೋಷ್ ಮನೆಯ ಧೂಳು ಹೊಡೆದು ವರ್ಷಗಳೇ ಸಂದಿತ್ತು. ಮನೆಯ ಕೋಣೆಗಳ ಗೋಡೆಗಳಲ್ಲೆಲ್ಲ ಹುತ್ತ ಬೆಳೆದಿದ್ದವು. ಸಂತೋಷ್ ರಾವ್ ತಂದೆ ಸುಧಾಕರ ರಾವ್ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.
ಸಂತೋಷ್ ರಾವ್ ಕುಟುಂಬಕ್ಕೆ ಹೊಸದಾಗಿ ಬದುಕು ಕಟ್ಟಿಕೊಡಬೇಕು. ನೈತಿಕವಾಗಿ ಕುಸಿದಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ಹಾಗೂ ಚೈತನ್ಯ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಒಡನಾಡಿ ಸಂಸ್ಥೆಯು ನೆರವು ನೀಡಲಿದೆ ಎಂದರು.
ಸೌಜನ್ಯಾ ಪ್ರಕರಣದಲ್ಲಿ ಮಾಡದ ತಪ್ಪಿಗೆ ಸಂತೋಷ್‌ರಾವ್ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸಂತೋಷ್‌ರಾವ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.
ಇತಿಹಾಸ ಸಂಶೋಧಕ ತಮ್ಮಣ್ಣ ಶೆಟ್ಟಿ, ಸುಧಾಕರ ರಾವ್ ಅವರ ಶಿಷ್ಯರೂ ಸೇರಿ ಹಲವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post