ಮಂಗಳೂರು: ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪದಲ್ಲಿ ಮುಲ್ಕಿ ಬಪ್ಪನಾಡು ನಿವಾಸಿಗಳಾದ ಅಬ್ದುಲ್ ರೆಹಮಾನ್ ಮತ್ತು ನಿಶಾಂತ್ ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ನಗರದ ದಡ್ಡಲ್ ಕಾಡ್ ಎಂಬಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಸರಕಾರದ ಬೇರೆ ಬೇರೆ ಇಲಾಖೆಯ ಕಚೇರಿ ಮತ್ತು ನ್ಯಾಯಾಲಯಕ್ಕೆ ವಂಚಿಸುತ್ತಿರುವ ವ್ಯಕ್ತಿಯ ಬಗ್ಗೆ ನಮಗೆ ಮಂಗಳವಾರ ಮಾಹಿತಿ ಲಭಿಸಿತ್ತು. ಅದರಂತೆ ಸ್ಥಳಕ್ಕೆ ತೆರಳಿ ಆರೋಪಿ ಅಬ್ದುಲ್ ರೆಹಮಾನ್ ನನ್ನು ವಿಚಾರಿಸಿದಾಗ ಆತ ಕೊಡಿಯಾಲ್ ಬೈಲ್‌ನ ಆನ್‌ಲೈನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್‌ನೊಂದಿಗೆ ಸೇರಿಕೊಂಡು ಆಧಾರ್ ಕಾರ್ಡ್‌ನ ನಂಬರ್, ಹೆಸರು, ಪೋನ್ ನಂಬರ್, ವಿಳಾಸ ಮತ್ತು ಫೋಟೊವನ್ನು ಎಡಿಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉರ್ವ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಬ್ದುಲ್ ರೆಹಮಾನ್‌ನ ಬಳಿ ಎರಡು ಫೋನ್‌ಗಳಲ್ಲಿ ಹಲವಾರು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆ ಯಾಗಿವೆ. ಅಬ್ದುಲ್ ರೆಹಮಾನ್ ಮತ್ತು ನಿಶಾಂತ್ ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ವಿವಿಧ ಇಲಾಖೆಗಳು ಮತ್ತು ನ್ಯಾಯಾಲಯದಲ್ಲಿ ಜಾಮೀನು ನೀಡಲು ಸಾರ್ವಜನಿಕರಿಗೆ ನೀಡಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ವಂಚನೆಗೆ ಸಂಬಂಧಿಸಿ ಇನ್ನೂ ಎರಡು ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post