ಮಂಗಳೂರು, ಅ.11: ನಗರ ಹೊದವಲಯದ ವಾಮಂಜೂರು ಜಂಕ್ಷನ್‌ನಲ್ಲಿ ಹಾಕಲಾದ ಶಾರದೋತ್ಸವದ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಲಾಗಿದೆ. ಬಂಧಿತರನ್ನು ಸ್ಥಳೀಯರೇ ಆದ ಸುಮಿತ್ ಹೆಗ್ಡೆ (25), ಯತೀಶ್ ಪೂಜಾರಿ (24), ಪ್ರವೀಣ್ ಪೂಜಾರಿ (24) ಎಂದು ಗುರುತಿಸಲಾಗಿದೆ. ಇವರು ಸಂಘಪರಿವಾರದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ. ದಿನಾಂಕ 08-10-2022 ರಂದು ಮಧ್ಯರಾತ್ರಿ ಸಮಯ ನಗರದ ವಾಮಂಜೂರು ಜಂಕ್ಷನ್ ನಲ್ಲಿ ಶಾರದೋತ್ಸವ ಕಾರ್ಯಕ್ರಮಕ್ಕೆ ಶುಭಕೋರಲು ವಾಮಂಜೂರು ಫ್ರೆಂಡ್ಸ್ ಸಂಘಟನೆಯು ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಧಾರ್ಮಿಕ ಭಾವನೆಗಳಿಗೆ ಅವಮಾನಗೊಳಿಸುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಮೂವರು ಕಿಡಿಗೇಡಿ ಯುವಕರನ್ನು ಬಂಧಿಸಿದ್ದಾರೆ. ಗುರುಪುರ ಆಸುಪಾಸಿನ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ ಮತ್ತು ಪ್ರವೀಣ್ ಪೂಜಾರಿ ಎಂಬ ಮೂವರನ್ನು ಬಂಧಿಸಿದ್ದು, ಅವರು ಬಳಸಿದ್ದ ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.8ರ ಮಧ್ಯರಾತ್ರಿ 1.30ರಿಂದ ಎರಡು ಗಂಟೆ ಮಧ್ಯದಲ್ಲಿ ಯುವಕರು ಕೃತ್ಯ ಎಸಗಿದ್ದರು. ರಸ್ತೆ ಬದಿ ಹಾಕಿದ್ದ ಫ್ಲೆಕ್ಸನ್ನು ಹರಿದು ಹಾಕಿದ್ದು ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ಪೊಲೀಸರು ಅದನ್ನೇ ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post