ಓಸ್ಲೋ: ವೆನೆಜುವೆಲಾದ ಜನರ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿ, ನ್ಯಾಯಯುತ ಹಾಗೂ ಶಾಂತಿಯುತ ಪರಿವರ್ತನೆ ತರಲು ಹೋರಾಡಿದ್ದಕ್ಕಾಗಿ ರಾಜಕಾರಣಿ, ಹಕ್ಕುಗಳ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಇದರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರಿ ನಿರಾಶೆಯಾಗಿದೆ.
ಮಾರಾ ಕೊರಿನಾ ಮಚಾದೊ ಅವರು ವೆನೆಜುವೆಲಾದ ಖ್ಯಾತ ರಾಜಕಾರಣಿ, ಕೈಗಾರಿಕಾ ಎಂಜಿನಿಯರ್ ಮತ್ತು ಮಾನವ ಹಕ್ಕುಗಳ ವಕೀಲರು. 1967ರ ಅಕ್ಟೋಬರ್ 7ರಂದು ಕ್ಯಾರಕಾಸ್‌ನಲ್ಲಿ ಜನಿಸಿದರು. ಮನಶ್ಶಾಸ್ತ್ರಜ್ಞೆ ಕೊರಿನಾ ಪ್ಯಾರಿಸ್ಕಾ ಮತ್ತು ಉದ್ಯಮಿ ಹೆನ್ರಿಕ್ ಮಚಾದೊ ಜುಲೋಗಾ ದಂಪತಿಯ ಹಿರಿಯ ಪುತ್ರಿ. ಬೆಲ್ಲೊ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದಿಂದ ಕೈಗಾರಿಕಾ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾರಕಾಸ್‌ನಲ್ಲಿರುವ ಇನ್‌ಸ್ಟಿಟ್ಯೂಟೊ ಡಿ ಎಸ್ಟುಡಿಯೋಸ್ ಸುಪೀರಿಯರ್ಸ್ ಡಿ ಅಡ್ಮಿನಿಸ್ಟ್ರೇಷಿಯನ್ (ಐಇಎಸ್‌ಎ) ನಿಂದ ಫೈನಾನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ್ದಾರೆ.
ಮಾರಾ ಕೊರಿನಾ ಮಚಾದೊ ಅವರು 2002ರಲ್ಲಿ ಚುನಾವಣಾ ಮೇಲ್ವಿಚಾರಣೆ ಮತ್ತು ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮೀಸಲಾಗಿರುವ ಸ್ಮೇಟ್ ಎಂಬ ಸಂಘಟನೆಯ ಸಹ-ಸ್ಥಾಪಕರೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2013ರಲ್ಲಿ ತಾವೇ ಸ್ಥಾಪಿಸಿದ ಉದಾರವಾದಿ ರಾಜಕೀಯ ಪಕ್ಷವಾದ ವೆಂಟೆ ವೆನೆಜುವೆಲಾದ ರಾಷ್ಟ್ರೀಯ ಸಂಯೋಜಕರಾದರು. ತಮ್ಮ ವೃತ್ತಿಜೀವನದುದ್ದಕ್ಕೂ ಮಚಾದೊ ಅವರು, ಹ್ಯೂಗೋ ಚ್ವೆಜ್ ಮತ್ತು ನಿಕೋಲ್ಸ್ ಮಡುರೊ ಅವರ ಆಡಳಿತದ ವಿಮರ್ಶಕರಾಗಿದ್ದರು. ಮಾರಾ ಕೊರಿನಾ ಅವರು ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ನೊಬೆಲ್ ಇತಿಹಾಸ: ನೊಬೆಲ್ ಪ್ರಶಸ್ತಿ ವೆಬ್‌ಸೈಟ್ ಪ್ರಕಾರ, ಸ್ವೀಡಿಷ್‌ನ ದಿಗ್ಗಜ ರಸಾಯನಶಾಸ್ತ್ರಜ್ಞ, ಇಂಜಿನಿಯರ್ ಮತ್ತು ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 10ರಂದು ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದೆ. ನೊಬೆಲ್ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಈ ಸಂಬಂಧ ಆಲ್ಫ್ರೆಡ್ ನೊಬೆಲ್ ತಮ್ಮ ಜೀವನದ ಕೊನೆಯಲ್ಲಿ ಒಂದು ಉಯಿಲು ಬರೆದಿದ್ದರು. ಅದರಲ್ಲಿ, ತಮ್ಮ ಸ್ಮರಣಾರ್ಥವಾಗಿ ಮನುಷ್ಯರಿಗೆ ಪ್ರಯೋಜವಾಗುವಂತಹ ಕೆಲಸ ಮಾಡಿದವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ತಿಳಿಸಿದ್ದರು. ಅವರು ತಮ್ಮ ಸಂಪೂರ್ಣ ಸಂಪತ್ತನ್ನು ಈ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದರು.
ನೊಬೆಲ್ ಫೌಂಡೇಶನ್ ಅನ್ನು 1900 ಜೂನ್ 29ರಂದು ಸ್ಥಾಪಿಸಲಾಯಿತು. ಆಲ್ಫ್ರೆಡ್ ಕೊನೆಯುಸಿರೆಳೆಯುವ ವೇಳೆಗೆ ನೊಬೆಲ್ ಫೌಂಡೇಶನ್ನಲ್ಲಿ ಅವರ ಆಸ್ತಿ ಮೌಲ್ಯ 29.34 ಕೋಟಿ ರೂ.ಗಳಷ್ಟಿತ್ತು. 2024ರ ವೇಳೆಗೆ ಅವರ ಆಸ್ತಿಯ ಮೌಲ್ಯವು ಗಮನಾರ್ಹವಾಗಿ ಏರಿಕೆ ಕಂಡು 2,300 ಕೋಟಿ ರೂ.ಗಳಿಗೆ ತಲುಪಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post