ಮಂಗಳೂರು: ನಗರದ ಜೆಪ್ಪು ಬಳಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ಮೃತ ವಿಜಯಲಕ್ಷ್ಮಿಯನ್ನು ಮಹಿಳೆಯೊಬ್ಬಳು ಮತಾಂತರಕ್ಕೆ ಯತ್ನಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದಿದ್ದ ನೂರ್ ಜಹಾನ್ ಎಂಬಾಕೆಯನ್ನು ಬಂಧಿಸಲಾಗಿದೆ. ಈಕೆ ವಿಜಯಲಕ್ಷ್ಮಿಯನ್ನು ಮುಸ್ಲಿಂ ಸಮುದಾಯದವರ ಜತೆ ಮದುವೆಗೆ ಯತ್ನಿಸಿರುವುದು ಸಾಂದರ್ಭಿಕ ದಾಖಲೆಗಳಿಂದ ದೃಢಗೊಂಡಿದೆ ಎಂದು ಹೇಳಿದ್ದಾರೆ.
ನೂರ್ ಜಹಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ ವಿಜಯಲಕ್ಷ್ಮಿ ಕುಟುಂಬದ ಜತೆ ಅಲ್ಲೇ ನಾಲ್ಕು ವರ್ಷ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಜಗಳ ನಡೆಯುತ್ತಿತ್ತು, ಮನೆಯಲ್ಲಿ ಪ್ರತೀನಿತ್ಯ ಕುಡಿದು ಬಂದು ಪತಿ ನಾಗೇಶ್ ಜಗಳ ಮಾಡುತ್ತಿದ್ದು, ತನ್ನ ಬಳಿ ಕುಟುಂಬದ ಸಮಸ್ಯೆ ಹೇಳಿಕೊಂಡಾಗ ಮುಸ್ಲಿಂ ಸಮುದಾಯದವರ ಜತೆ ಮದುವೆ ಮಾಡಿಸುವ ಭರವಸೆ ನೀಡಿರುವುದು ತಿಳಿದು ಬಂದಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ನೂರ್ ಜಹಾನ್, ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲು ಹೇಳಿ ವಿಜಯಲಕ್ಷ್ಮಿ ಫೋಟೋವನ್ನು ತನ್ನಲ್ಲಿ ಇರಿಸಿಕೊಂಡು ಮುಸ್ಲಿಂ ಹುಡುಗನ ಹುಡುಕಾಟವನ್ನೂ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಕಮಿಷನರ್ ತಿಳಿಸಿದರು.
ಇದೇ ವಿಚಾರದಲ್ಲಿ ನಾಗೇಶ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆ ನಡೆದಿತ್ತು. ನೂರ್ ಜಹಾನ್ ಮನೆ ಬಳಿ ಬಂದು ಕೂಡ ಮೃತ ನಾಗೇಶ್ ಇದೇ ವಿಚಾರದಲ್ಲಿ ಗಲಾಟೆ ಮಾಡಿದ್ದ. ಘಟನೆ ನಡೆದ ಹಿಂದಿನ ರಾತ್ರಿಯೂ ಗಲಾಟೆ ನಡೆದು ಮಕ್ಕಳು ಮತ್ತು ಪತ್ನಿ ವಿಜಯಲಕ್ಷ್ಮಿಯನ್ನು ಕೊಂದು ನಾಗೇಶ್ ನೇಣಿಗೆ ಶರಣಾಗಿದ್ದ ಎಂದು ತಿಳಿಸಿದರು.
ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಹಿಳೆ ನೂರ್ ಜಹಾನ್ ಬಂಧನ ಮಾಡಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post