ಮಂಗಳೂರು,ಡಿ.11: ನಗರದ ಚಿನ್ನಾಭರಣದ ಮಳಿಗೆಯೊಂದಕ್ಕೆ ನುಗ್ಗಿ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ನಾಲ್ಕು ಮಂದಿಯನ್ನು ಕದ್ರಿ ಪೊಲೀಸರು ರವಿವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೇತನ್ ಕುಮಾರ್ (39), ಪ್ರಕಾಶ್ (34), ಜೆಪ್ಪಿನಮೊಗರುವಿನ ಶಿಬಿನ್ ಪಡಿಕಲ್ (36) ಹಾಗೂ ಅತ್ತಾವರದ ಗಣೇಶ್ (35) ಎಂದು ಗುರುತಿಸಲಾಗಿದೆ. ವಾರದ ಹಿಂದೆ ಕಂಕನಾಡಿಯ ಸುಲ್ತಾನ್ ಗೋಲ್ಡ್ ಜುವೆಲ್ಲರಿಗೆ ದಾಳಿ ನಡೆಸಿದ್ದ ಬಜರಂಗದಳ ಕಾರ್ಯಕರ್ತರು ಅಲ್ಲಿದ್ದ ಯುವ ಜೋಡಿಗೆ ಹಲ್ಲೆ ನಡೆಸಿದ್ದರು. ಅಲ್ಲಿ ಕೆಲಸಕ್ಕಿದ್ದ ಹಿಂದು ಯುವತಿ, ಚಿನ್ನಾಭರಣ ಮಳಿಗೆಯ ಮಾರಾಟ ವಿಭಾಗದ ಯುವಕ ಮತ್ತು ಯುವತಿಯು ಅನ್ಯೋನ್ಯತೆಯಿಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗುಂಪು ಡಿ.6ರ ಸಂಜೆ ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಪೊಲೀಸರ ಸಮ್ಮುಖವೇ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು.
ಯುವತಿ ತೀರ್ಥಹಳ್ಳಿ ಮೂಲದ ನಿವಾಸಿಯಾಗಿದ್ದು ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಆನಂತರ ಜುವೆಲ್ಲರಿಗೆ ಕೆಲಸ ಬದಲಾಯಿಸಿದ್ದಳು. ಈ ವೇಳೆ, ಅಲ್ಲಿದ್ದ ಯುವಕನ ಪರಿಚಯವಾಗಿ ತಿರುಗಾಟ ಆರಂಭಿಸಿದ್ದಳು. ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಯುವತಿಯ ಹೆತ್ತವರಿಗೂ ಮಾಹಿತಿ ನೀಡಿದ್ದರು.


ಮೊನ್ನೆ ಹೆತ್ತವರನ್ನು ಜುವೆಲ್ಲರಿಗೆ ಕರೆಸಿ, ಅವರಿಂದಲೇ ಯುವತಿಗೆ ಎರಡೇಟು ಬಿಗಿಯುವಂತೆ ಮಾಡಿದ್ದಾರೆ. ಅಲ್ಲದೆ, ಮುಸ್ಲಿಂ ಯುವಕನಿಗೂ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಘಟನೆ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರತ್ಯೇಕ ಮೂರು ದೂರು ದಾಖಲಾಗಿ ಎಫ್ಐಆರ್ ಆಗಿತ್ತು. ಹಲ್ಲೆಗೊಳಗಾದ ಯುವಕ ಹಲ್ಲೆ ಕೃತ್ಯದ ಬಗ್ಗೆ, ಸುಲ್ತಾನ್ ಗೋಲ್ಡ್ ಜುವೆಲ್ಲರಿಯವರು ಮಳಿಗೆ ಒಳಗೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿರುವ ಬಗ್ಗೆ ದೂರು ನೀಡಿದ್ದರು. ಇದಲ್ಲದೆ, ಯುವತಿಯ ತಾಯಿಯೂ ದೂರು ನೀಡಿದ್ದರು. ಇದರಂತೆ, ಪ್ರತ್ಯೇಕ ಕೇಸು ದಾಖಲಾಗಿದ್ದು ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post