ಮಂಗಳೂರು : ಮಾದಕ ವಸ್ತು ಜಾಲದ ವಿರುದ್ಧ ಸಮರ ಮುಂದುವರೆಸಿರುವ ಮಂಗಳೂರು ಸಿಸಿಬಿ ಪೊಲೀಸರು, ಬೃಹತ್ ಪ್ರಮಾಣದ ಡ್ರಗ್ಸ್ ಪೂರೈಸುತ್ತಿದ್ದ ಅಂತಾರಾಷ್ಟ್ರೀಯ ಪೆಡ್ಲರ್ ಒಬ್ಬಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಗಾಂಡಾ ಮೂಲದ ಈ ಮಹಿಳೆಯಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಾಚರಣೆಯ ಹಿನ್ನೆಲೆ : ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಹೊರವಲಯದ ಜಿಗಣಿ ಇಂಡಸ್ಟ್ರಿ ಏರಿಯಾದ ಮಧುಮಿತ್ರ ಲೇಔಟ್ ನಲ್ಲಿ ವಾಸವಿದ್ದ ಉಗಾಂಡಾ ಮೂಲದ ಮಹಿಳೆ ಜಾಲಿಯಾ ಜಲ್ವಾಂಗೋ(34) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ, ಆಕೆಯ ಬಳಿಯಿದ್ದ 4 ಕೇಜಿ ಎಂಡಿಎಂಎ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ನಾಲ್ಕು ಕೋಟಿಯೆಂದು ಪೊಲೀಸರು ಅಂದಾಜಿಸಿದ್ದಾರೆ.
ಜಿಗಣಿ ಸುತ್ತಮುತ್ತ ಕಾಡು ಪ್ರದೇಶವಿದ್ದು, ಅಲ್ಲಿಂದ ಲೊಕೇಶನ್ ಹಾಕಿ ಮಹಿಳೆ ತನ್ನ ಇರವು ತಿಳಿಯದಂತೆ ಪೆಡ್ಲರ್ ಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದಳು. ಉಗಾಂಡ ಮಹಿಳೆ 2020ರಲ್ಲಿ ಬೆಂಗಳೂರಿಗೆ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದು, ಅಕ್ರಮವಾಗಿ ಉಳಿದುಕೊಂಡಿದ್ದಳು. ಆಕೆಯನ್ನು ಬಂಧಿಸಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದರೂ, ಅವರಿಗೆ ಯಾರು, ಎಲ್ಲಿಂದ ಪೂರೈಕೆ ಮಾಡುತ್ತಾರೆಂಬ ಮಾಹಿತಿ ಇರುತ್ತಿರಲಿಲ್ಲ. ಟೆಲಿಗ್ರಾಂನಲ್ಲಿ ಮಾತ್ರ ಇವರ ಸಂಪರ್ಕ ಇರುತ್ತಿದ್ದುದರಿಂದ ಪತ್ತೆ ಆಗುತ್ತಿರಲಿಲ್ಲ.
ಮಂಗಳೂರು ಸಿಸಿಬಿ ಪೊಲೀಸರು ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿ ಬೆಂಗಳೂರಿನ ಡ್ರಗ್ಸ್ ಕುಳವನ್ನು ಪತ್ತೆ ಮಾಡಿದ್ದಾರೆ. 2024ರ ಅಕ್ಟೋಬರ್ ನಲ್ಲಿ ಹೊಸೂರಿನಲ್ಲಿ 6 ಕೇಜಿ ಎಂಡಿಎಂಎ ಮತ್ತು 2025ರ ಮಾರ್ಚ್ ನಲ್ಲಿ ವರ್ತೂರುನಿಂದ ನೈಜೀರಿಯನ್ ಮಹಿಳೆ ಸಹಿತ 37 ಕೇಜಿ ಡ್ರಗ್ಸ್ ಪತ್ತೆ ಮಾಡಲಾಗಿತ್ತು. ಸುಮಾರು 75 ಕೋಟಿ ಮೌಲ್ಯದ ಡ್ರಗ್ಸ್ ಬೇಟೆ ರಾಜ್ಯದ ಅತಿದೊಡ್ಡ ಡ್ರಗ್ಸ್ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು.
ಜಾಲ ಪತ್ತೆಯಾದದ್ದು ಹೇಗೆ? ಈ ಮಹಿಳೆಯ ಬಂಧನಕ್ಕೂ ಮೊದಲು ಮಂಗಳೂರಿನಲ್ಲಿ ಆರು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಸೆರೆಹಿಡಿದಿದ್ದರು. ಅವರ ವಿಚಾರಣೆಯ ಸಂದರ್ಭದಲ್ಲಿ ಬೆಂಗಳೂರಿನ ಈ ಮಹಿಳೆಯ ಸಂಪರ್ಕ ಬಯಲಿಗೆ ಬಂದಿತ್ತು. ಈ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ಶಿಯಾಬ್, ಮೊಹಮ್ಮದ್ ನೌಷಾದ್, ಇಮ್ರಾನ್ ಮತ್ತು ನಿಸಾರ್ ಅಹಮ್ಮದ್ ಎಂಬ ನಾಲ್ವರನ್ನು ಬಂಧಿಸಿ 524 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಸುರತ್ಕಲ್ ವ್ಯಾಪ್ತಿಯಲ್ಲಿ ಮೊಹಮ್ಮದ್ ಇಕ್ಬಾಲ್ ಮತ್ತು ಶೆಹರಾಜ್ ಶಾರೂಕ್ ಎಂಬ ಇಬ್ಬರನ್ನು 200 ಗ್ರಾಂ ಡ್ರಗ್ಸ್ ಸಹಿತ ಬಂಧಿಸಲಾಗಿತ್ತು. ಈ ಆರು ಮಂದಿ ಆರೋಪಿಗಳು ನೀಡಿದ ಮಹತ್ವದ ಸುಳಿವು ಈ ಅಂತಾರಾಷ್ಟ್ರೀಯ ಡ್ರಗ್ ಜಾಲದ ಕಿಂಗ್‌ಪಿನ್ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಯಿತು.
Discover more from Coastal Times Kannada
Subscribe to get the latest posts sent to your email.







Discussion about this post