ಬೆಂಗಳೂರು: ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮಂಗಳೂರು ಮೂಲದ ಸಾಫ್ಟ್‌ವೇರ್ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಶರ್ಮಿಳಾ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿಲ್ಲ. ಬದಲಾಗಿ ಪ್ರಿಯಕರನೇ ಕೊಲೆ ಮಾಡಿ ಬಳಿಕ ಸಾಕ್ಷ್ಯ ನಾಶ ಮಾಡಲು ಮನೆಗೆ ಬೆಂಕಿ ಇಟ್ಟಿದ್ದಾನೆ ಎನ್ನುವ ಸ್ಫೋಟಕ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದ್ದು, ಈ ಸಂಬಂಧ ಶರ್ಮಿಳಾ ಪ್ರಿಯಕರ ಕೇರಳ ಮೂಲದ ಕರ್ನಲ್ ಕುರೈ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶರ್ಮಿಳಾ ಕೊಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, 18 ವರ್ಷದ ಯುವಕ ಕರ್ಣಲ್ ಕುರೈ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಸುಬ್ರಮಣ್ಯ ಲೇಔಟ್‌ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ, ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ.
ಬಂಧಿತ ಆರೋಪಿ ಕೇರಳ ಮೂಲದವನು ಎಂದು ತಿಳಿದುಬಂದಿದೆ. ಶರ್ಮಿಳಾ ಕಳೆದ ಎರಡು ವರ್ಷಗಳಿಂದ ಸುಬ್ರಹ್ಮಣ್ಯ ಲೇಔಟ್‌ನಲ್ಲಿ ವಾಸವಿದ್ದರು. ಇನ್ನು ಆರೋಪಿ ಕರ್ನಲ್ ಕುರೖ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿದ್ದು, ಪ್ರತಿದಿನ ಇಬ್ಬರೂ ಮಾತನಾಡುತ್ತಿದ್ದು, ಇದರ ನಡುವೆ ಕುರೈಗೆ ಶರ್ಮಿಳನ ಮೇಲೆ ಲವ್ ಆಗಿದೆ. ಆದ್ರೆ, ಈ ಲವ್ ವಿಚಾರವನ್ನು ಶರ್ಮಿಳಾಗೆ ಹೇಳಿರಲಿಲ್ಲ. ಹೀಗೆ ಒಂದು ದಿನ ಅಂದರೆ ಜನವರಿ 3ರಂದು ಕರ್ನಲ್ ಕುರೈ, ಬಾಲ್ಕನಿ ಮೂಲಕ ಶರ್ಮಿಳಾಳ ಮನೆಯೊಳಗೆ ನುಗ್ಗಿದ್ದು, ಸಡನ್ ಆಗಿ ಹಿಂಬದಿಯಿಂದ ಶರ್ಮಿಳಾಳನ್ನ ಅಪ್ಪಿಕೊಂಡಿದ್ದ. ಆಗ ಶರ್ಮಿಳಾ ಕರ್ನಲ್ ಕುರೈನಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಆ ವೇಳೆ ಕುರೈ, ಶರ್ಮಿಳಾಳ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಇದರಿಂದ ಶರ್ಮಿಳಾ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಶರ್ಮಿಳಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ಸಾಕ್ಷಿ ನಾಶ ಮಾಡಲು ಮನೆಗೆ ಬೆಂಕ್ಕಿ ಹಚ್ಚಿ ಪರಾರಿಯಾಗಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.
ಮೃತ ಶರ್ಮಿಳಾ (34) ಅವರು ಮಂಗಳೂರಿನ ಕಾವೂರು ಮೂಲದವರು. ಕಳೆದ ಒಂದೂವರೆ ವರ್ಷಗಳಿಂದ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಅವರು ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.
ಹೊಗೆಯಿಂದ ಉಸಿರುಟ್ಟಿ ಸಾವು ಎನ್ನಲಾಗಿತ್ತು: ಜನವರಿ 3ರಂದು ರಾತ್ರಿ 10:30ರ ಸುಮಾರಿಗೆ ಶರ್ಮಿಳಾ ವಾಸವಿದ್ದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದನ್ನು ಕಂಡ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಸೋಫಾ, ಕರ್ಟನ್, ಬೆಡ್ ಸುಟ್ಟು ಕರಕಲಾಗಿದ್ದು, ಶರ್ಮಿಳಾ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡು ಬಂದಿತ್ತು. ಬೆಂಕಿ ನಂದಿಸಿದ್ದ ಪೊಲೀಸರು ತಕ್ಷಣ ಶರ್ಮಿಳಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದರು. ನಂತರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದರು. ಕೊನೆಗೆ ಇದು ಅಸಹಜ ಸಾವಲ್ಲ ಕೊಲೆ ಎಂಬುದು ಬಯಲಾಗಿದೆ.

Discover more from Coastal Times Kannada
Subscribe to get the latest posts sent to your email.







Discussion about this post