ಮಂಗಳೂರು, ಎ.12: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 16 ಸಂಪೂರ್ಣ ಗಣಕೀಕೃತ ಶಾಖೆಗಳನ್ನು ಹೊಂದಿರುವ 111 ವರ್ಷಗಳ ಇತಿಹಾಸವಿರುವ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2023 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ 12.20 ಕೋಟಿ ರೂಪಾಯಿ ಲಾಭಗಳಿಕೆಯನ್ನು ದಾಖಲಿಸಿರುತ್ತಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಮಾಡಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.37% ಎನ್.ಪಿ.ಎ. ದಾಖಲಿಸಿದೆ.
ದಾಖಲೆಯ ಲಾಭ ಮತ್ತು ಕನಿಷ್ಟ ಎನ್.ಪಿ.ಎ. ಜೊತೆಗೆ, 2022-2023ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಿ ಮಹತ್ವದ ಸಾಧನೆಯನ್ನು ಮಾಡಿದೆ. ಶೀಘ್ರದಲ್ಲೇ ಈ ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 16 ಶಾಖೆಗಳನ್ನು ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್ 2022-23 ವಿತ್ತೀಯ ವರ್ಷದಲ್ಲಿ ದಾಖಲೆಯ ರೂ.12.20 ಕೋಟಿ ಲಾಭವನ್ನು ಗಳಿಸಿರುತ್ತದೆ. 2022-23 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ (Net Worth) ರೂ. 46 ಕೋಟಿಯಿಂದ ರೂ.59 ಕೋಟಿಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ರೂ. 933.21 ಕೋಟಿ ತಲುಪಿದೆ.

ಬ್ಯಾಂಕಿನ ಇತಿಹಾಸದಲ್ಲಿ 2002-23ನೇ ವಿತ್ತೀಯ ವರ್ಷದಲ್ಲಿ ಮೊದಲ ಬಾರಿಗೆ ಸ್ಥಾಪಕರ ದಿನಾಚರಣೆಯನ್ನು ಬ್ಯಾಂಕಿನಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸುವುದರ ಜೊತೆಗೆ, ನವೀಕೃತ ಸಭಾಭವನಕ್ಕೆ ಸ್ಥಾಪಕರ ಹೆಸರು ಇಡಲಾಯಿತು. ಎಲ್ಲಾ 16 ಶಾಖೆಗಳಲ್ಲಿ ಗ್ರಾಹಕರ ಸಮಾವೇಶಗಳನ್ನು ಏರ್ಪಡಿಸಿ, ಬ್ಯಾಂಕಿನ ಸೇವೆಯ ಬಗ್ಗೆ ಗ್ರಾಹಕರ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಶಾಖಾವಾರು ಅನುಷ್ಠಾನಗೊಳಿಸಲಾಯಿತು. ಇದರಿಂದ ಬ್ಯಾಂಕಿನಲ್ಲಿ ಗ್ರಾಹಕರ ಸಂಖ್ಯೆಯು ಹೆಚ್ಚಾಗಲು ಕಾರಣವಾಯಿತು. ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವವನ್ನು ಸಾಮಾಜಿಕ ಕಾಳಜಿಯೊಂದಿಗೆ, ಸಮಾಜದ ಅಶಕ್ತ ವರ್ಗದ ಜನರ ಚಿಕಿತ್ಸೆಗೆ, ವಸತಿ ನಿವೇಶನ ದುರಸ್ತಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಹೆಣ್ಣು ಮಕ್ಕಳ ವಿವಾಹದ ವೆಚ್ಚಕ್ಕೆ ನೆರವು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಅನಿಲ್ ಲೋಬೊ – ಅಧ್ಯಕ್ಷರು, ಜೆರಾಲ್ಡ್ ಜೂಡ್ ಡಿಸಿಲ್ವ – ಉಪಾಧ್ಯಕ್ಷರು, ಸುನಿಲ್ ಮಿನೇಜಸ್ – ಮಹಾ ಪ್ರಬಂದಕರು. ಸದಸ್ಯರಾದ – ಆಂಡ್ ಡಿಸೊಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ಲೊಯ್ ಕಿರಣ್ ಕಾಸ್ಟ್, ಹೆರಾಲ್ಡ್ ಮೊಂತರೊ, ರೋಶನ್ ಡಿಸೋಜಾ, ಮಾರ್ಸೆಲ್ ಡಿಸೋಜಾ, ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜಾ, ಅಶ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಹಾಗೂ ಶರ್ಮಿಳಾ ಮಿನೇಜಸ್
Discover more from Coastal Times Kannada
Subscribe to get the latest posts sent to your email.








Discussion about this post