ತಿರುವನಂತಪುರಂ: ಕುಂಭಮೇಳ ಸಂಧರ್ಭದಲ್ಲಿ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಕುಂಭಮೇಳದ ಹುಡುಗಿ ಮೊನಾಲಿಸಾ ಭೋಂಸ್ಲೆ ಮದುವೆಯಾದಾಗ ಅಪ್ರಾಪ್ತೆ ಎಂದು ದೃಢಪಟ್ಟಿದ್ದು, ಈ ಹಿನ್ನೆಲೆ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ವಿವಾಹದ ಸಮಯದಲ್ಲಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣವು ಕೇರಳದಲ್ಲಿ ರಾಜಕೀಯ ನಾಯಕರ ಜಟಾಪಟಿಗೆ ಕಾರಣವಾಗಿದೆ.
ಫೋನ್ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಆದರೆ, ಈ ಹಿಂದೆ ನೀಡಲಾಗಿದ್ದ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ದಂಪತಿ ಇನ್ನೂ ಕೇರಳದಲ್ಲಿರುವ ಮಾಹಿತಿ ಇದೆ. ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮದುವೆಯ ಸಮಯದಲ್ಲಿ ಕುಂಭಮೇಳದ ಹುಡುಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಳು ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆ, ಮಧ್ಯಪ್ರದೇಶದ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಮೂಲದ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ (NCST) ನಡೆಸಿದ ತನಿಖೆಯಲ್ಲಿ ಮೊನಾಲಿಸಾ ಭೋಂಸ್ಲೆ ಮಧ್ಯಪ್ರದೇಶದ ಪಾರ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳೆಂದು ಹಾಗೂ ಡಿಸೆಂಬರ್ 30, 2009 ರಂದು ಜನಿಸಿರುವುದಾಗಿ ದೃಢಪಟ್ಟಿದೆ. ಈ ಮಾಹಿತಿಯಡಿ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹೇಶ್ವರ ಆಸ್ಪತ್ರೆಯ ಅಧಿಕೃತ ದಾಖಲೆಗಳ ಪ್ರಕಾರ, ಮಾರ್ಚ್ 11, 2026ರಂದು ಕೇರಳದಲ್ಲಿ ಮದುವೆ ನಡೆದಾಗ ಆಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಕೇರಳದಲ್ಲಿ ಮದುವೆ ನೋಂದಣಿ ಮಾಡುವಾಗ ವಯಸ್ಕಳೆಂದು ತೋರಿಸಲು ನಕಲಿ ಜನನ ಪ್ರಮಾಣಪತ್ರವನ್ನು ಬಳಸಲಾಗಿದೆ. ಆಕೆಯನ್ನು ಉದ್ದೇಶಪೂರ್ವಕವಾಗಿ 18 ವರ್ಷ ಮೇಲ್ಪಟ್ಟವಳೆಂದು ಬಿಂಬಿಸಲು ಸಂಚು ರೂಪಿಸಲಾಗಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ, ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಎ. 22 ರಂದು ದೆಹಲಿಯಲ್ಲಿ ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ. ಪ್ರಕರಣದ ಪ್ರಗತಿ ವರದಿಗಳನ್ನು ಪ್ರತಿ ಮೂರು ದಿನಗಳಿಗೊಮ್ಮೆ ಸಲ್ಲಿಸುವಂತೆಯೂ ಆಯೋಗವು ಕೇಳಿದೆ. ಈ ಹಿನ್ನೆಲೆ ಮದುವೆ ದಿನ ಮೊನಾಲಿಸಾ ಭೋಂಸ್ಲೆ ವಯಸ್ಕಳೆಂದು ಹೇಳುವ ಆಧಾರ್ ಕಾರ್ಡ್ ಅನ್ನು ತೋರಿಸಿದ್ದು, ನಕಲಿ ದಾಖಲೆಗಳಿರಬಹುದು ಎಂಬ ಶಂಕೆ ಹಿನ್ನೆಲೆ ತನಿಖಾಧಿಕಾರಿಗಳು ಇದೀಗ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಈ ಘಟನೆಯ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ ಎಂದು ಆರೋಪ ಮಾಡಿರುವ NCST ಯ ಕಾನೂನು ಸಲಹೆಗಾರ ಪ್ರಕಾಶ್ ಉಯ್ಕೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆಕೆಯನ್ನು ಮದುವೆಯಾದ ವ್ಯಕ್ತಿಯ ವಿರುದ್ಧ POCSO ಆರೋಪದ ಜೊತೆಗೆ, ಪರಿಶಿಷ್ಟ ಜಾತಿಯ ಮೇಲಿನ ದೌರ್ಜನ್ಯದ ಆರೋಪವನ್ನೂ ಹೊರಿಸಲಾಗುವುದು ಎಂದು ಪ್ರಕಾಶ್ ಉಯ್ಕೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮದುವೆಯಲ್ಲಿ ಭಾಗಿಯಾದ ಕೇರಳದ ಸಿಪಿಎಂ ನಾಯಕರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು. ಜೊತೆಗೆ ನಕಲಿ ಜನನ ಪ್ರಮಾಣಪತ್ರವನ್ನು ತಯಾರಿಸಲು ಸಹಾಯ ಮಾಡಿದವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಪ್ರಕಾಶ್ ಉಯ್ಕೆ ಒತ್ತಾಯಿಸಿದ್ದಾರೆ. ಅರುಮನೂರ್ ಶ್ರೀನೈನಾರ್ ದೇವರ ದೇವಸ್ಥಾನದಲ್ಲಿ ನಡೆದ ಮಾ.11 ರಂದು ನಡೆದ ಅವರ ವಿವಾಹದಲ್ಲಿ ಸಚಿವರಾದ ವಿ. ಶಿವನ್ ಕುಟ್ಟಿ, ಸಂಸದ ಎ.ಎ. ರಹೀಮ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಭಾಗವಹಿಸಿ ಆಶೀರ್ವಾದ ಮಾಡಿದ್ದರು. ಇದು ನಿಜವಾದ ಕೇರಳದ ಕಥೆ ಎಂದೂ ಹೇಳಿಕೊಂಡಿದ್ದರು. ಸದ್ಯ ಪೋಕ್ಸೊ ಪ್ರಕರಣದಿಂದ ಸಿಪಿಎಂ ಮುಖಂಡರು ಆಘಾತಕ್ಕೊಳಗಾಗಿದ್ದಾರೆ.
ಸಿಪಿಎಂ ತಿರುವನಂತಪುರಂ ಜಿಲ್ಲಾ ಕಾರ್ಯಕಾರಿ ಕಾರ್ಯದರ್ಶಿ ಎಎ ರಹೀಮ್ ಈಟಿವಿ ಭಾರತಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಈಗ ಹೆಚ್ಚಿಗೆ ಮಾತನಾಡಲಾರೆ. ಹೇಳಬೇಕಾದ ಎಲ್ಲ ವಿಷಯವನ್ನೂ ಆ ದಿನವೇ ಹೇಳಲಾಗಿದೆ ಎಂದಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಈ ಮದುವೆಯನ್ನು ಸಮರ್ಥಿಸಿಕೊಂಡಿದ್ದು, ದೂರನ್ನು ರಾಜಕೀಯ ಪ್ರೇರಿತ ಎಂದು ಹೇಳಿದೆ. ಆಧಾರ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮದುವೆ ನಡೆಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಹೇಳಿದರೆ, ಮದುವೆಗೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಪರಿಶೀಲನೆ ನಡೆಸಲಾಗಿತ್ತು ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು.
ಕ್ರಮಕ್ಕೆ ಬಿಜೆಪಿ ಒತ್ತಾಯ: ಇದೊಂದು ಪಿತೂರಿಯ ಭಾಗವಾಗಿದೆ. ಅಂದು ನಡೆದ ಮದುವೆಯಲ್ಲಿ ಭಾಗಿಯಾದ ಸಿಪಿಐ-ಎಂ ಮುಖಂಡರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇರಳ ಬಿಜೆಪಿ ಒತ್ತಾಯಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post