ಮಂಗಳೂರು, ಜುಲೈ.12: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ನವೀಕರಿಸಲಾದ ಸಂಸದರ ಕಚೇರಿಯನ್ನು ಆರೆಸ್ಸೆಸ್ ಹಿರಿಯ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿ ಶುಭ ಕೋರಿದರು.

ಇದೇ ವೇಳೆ, ಮಾತನಾಡಿದ ಕಲ್ಲಡ್ಕ ಭಟ್, ಹಿಂದುತ್ವ ಮತ್ತು ದೈವ ದೇವರ ಆರಾಧನಾ ಕ್ಷೇತ್ರದಲ್ಲಿ ದೇವರ ಮತ್ತು ಜನರ ಆಶೀರ್ವಾದದಿಂದ ನಮ್ಮ ಕ್ಷೇತ್ರಕ್ಕೆ ಒಬ್ಬ ಕ್ಯಾಪ್ಟನ್, ಯೋಧ ಜನಪ್ರತಿನಿಧಿಯಾಗಿ ಲಭಿಸಿದ್ದು ಸಂಸತ್ತಿಗೆ ಹೋಗಿದ್ದಾರೆ. ಸೇನೆಯಲ್ಲಿ ಯೋಧ ದೇಶಕ್ಕಾಗಿ ಕೆಲಸ ಮಾಡುತ್ತಾನೆ. ಅದೇ ರೀತಿ ಬ್ರಿಜೇಶ್ ಚೌಟರು ಈ ಜಿಲ್ಲೆಯ ಅಭಿವೃದ್ಧಿಗಾಗಿ ಯೋಧನಂತೆ ಕೆಲಸ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದಾರೆಂಬ ವಿಶ್ವಾಸ ಇದೆ. ಸಂಸದರ ಕಚೇರಿ ಅಂದರೆ, ಇದು ಕುಳಿತುಕೊಳ್ಳಲು ಇರುವ ಜಾಗ ಅಲ್ಲ. ಸಮಸ್ಯೆ ಹೇಳಿಕೊಂಡು ಬರುವ ಜನರ ಅಹವಾಲು ಆಲಿಸಲು ಇರುವ ಕಚೇರಿ. ಯೋಧನ ರೀತಿ ಇಲ್ಲಿ ತಮ್ಮನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಾನು ಜನರ ಹಕ್ಕುಗಳಿಗಾಗಿ ಕೆಲಸ ಮಾಡಲು ಬಯಸುತ್ತೇನೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಅವಕಾಶಗಳನ್ನು ಒದಗಿಸಲು ನಾನು ಸರ್ವಶಕ್ತನನ್ನು ಪ್ರಾರ್ಥಿಸುತ್ತೇನೆ. ಬಿಜೆಪಿ ಪಕ್ಷದ ಕಾರ್ಯಕರ್ತರ ಸಹಾಯದಿಂದ ನಾನು ಶ್ರಮಿಸುತ್ತೇನೆ. ಮತ್ತು ನರೇಂದ್ರ ಮೋದಿಯವರ ‘ವಿಕಸಿತ ಭಾರತ್’ ನ ಅದೇ ಕನಸಿನೊಂದಿಗೆ ನಾವು ‘ವಿಕಸಿತ ದಕ್ಷಿಣ ಕನ್ನಡ’ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಮಾರ್ಗದರ್ಶನದಲ್ಲಿ ನಾನು ಎಲ್ಲಿದ್ದರೂ ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೇನೆ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಇಲ್ಲಿ ಕಚೇರಿಯಲ್ಲಿ ಕೆಲಸ ಮಾಡಲಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಈ ಕಛೇರಿಯ ಉದ್ಘಾಟನೆಯನ್ನು ಕಲ್ಲಡ್ಕ ಪ್ರಭಾಕರ ಭಟ್ ನೆರವೇರಿಸಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜನರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ, ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ. ಜನರು ಇಲ್ಲಿಗೆ ಬಂದಾಗಲೆಲ್ಲಾ ಅವರಿಗೆ ಸಹಾಯ ಮಾಡಬೇಕು ಎಂದರು.
ಸತೀಶ್ ಕುಂಪಲ, ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರತಾಪ್ ಸಿಂಹ ನಾಯ್ಕ್, ಸುಹೀರ್ ಶೆಟ್ಟಿ ಕಣ್ಣೂರು ಸೇರಿದಂತೆ ಬಿಜೆಪಿ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post