ನವದೆಹಲಿ: 270ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ಅಹಮದಾಬಾದ್ ವಿಮಾನ ದುರಂತದ ಕಾರಣ ಬಯಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಿದ್ದ ವಿಮಾನ ಅಪಘಾತಗಳ ತನಿಖಾ ಸಂಸ್ಥೆಯ (AAIB) ವರದಿ ಶುಕ್ರವಾರ ತಡರಾತ್ರಿ ಬಿಡುಗಡೆಯಾಗಿದೆ.
ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್ಗಳಿಗೆ ಇಂಧನ ಪೂರೈಕೆ ನಿಂತಿದೆ. ಅದರ ಸ್ವಿಚ್ಗಳು RUN ನಿಂದ CUT OFF ಆಗಿದ್ದವು. ಇದರಿಂದ ಇಂಧನ ಸರಬರಾಜಾಗದೆ, ವಿಮಾನ ಮೇಲೆಕ್ಕೆ ಹಾರಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿಯಲ್ಲಿ ಎಎಐಬಿ ತಿಳಿಸಿದೆ.
ಪೈಲಟ್ಗಳ ಮಾತುಕತೆ ರೆಕಾರ್ಡ್: ವಿಮಾನ ದುರಂತಕ್ಕೀಡಾಗುವ ಮೊದಲು ಪೈಲಟ್ಗಳಿಬ್ಬರು ಮಾತನಾಡಿಕೊಂಡಿದ್ದು, ಬ್ಲ್ಯಾಕ್ಬಾಕ್ಸ್ನಲ್ಲಿ ದಾಖಲಾಗಿದೆ. ಒಬ್ಬ ಪೈಲಟ್ ‘ಇಂಧನವನ್ನು ಏಕೆ ಆಫ್ ಮಾಡಿದ್ದೀರಿ’ ಎಂದು ಕೇಳುತ್ತಾರೆ. ಅದಕ್ಕೆ ಇನ್ನೊಬ್ಬ ಪೈಲಟ್ ‘ನಾನು ಮಾಡಿಲ್ಲ’ ಎಂದು ಹೇಳುತ್ತಾರೆ. ಇಂಧನ ಸ್ವಿಚ್ಗಳನ್ನು ಮರುಚಾಲನೆ ಮಾಡಿದರೂ, ಅವು ಸಕ್ರಿಯವಾಗಿಲ್ಲ ಎಂದು ತನಿಖಾ ವರದಿ ಹೇಳಿದೆ.
ವಿಮಾನ ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಭೀಕರವಾಗಿ ದುರಂತಕ್ಕೀಡಾಯಿತು. ಅಪಘಾತ ಸ್ಥಳದಲ್ಲಿ ಇಂಧನದ ಮಾದರಿಯನ್ನು ಸಂಗ್ರಹಿಸಿ ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಅದರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಎಎಐಬಿ ಮಾಹಿತಿ ನೀಡಿದೆ.
ವಿಮಾನವು 1:38:39 ಸೆಕೆಂಡ್ಗೆ ಟೇಕ್ಆಫ್ ಆಯಿತು. 1:39:09 ಸೆಕೆಂಡ್ಗೆ ಅಪಘಾತಕ್ಕೀಡಾಗಿದೆ. 1:39:05 ಸೆಕೆಂಡ್ಗೆ ಪೈಲಟ್‌ಗಳಲ್ಲಿ ಒಬ್ಬರು ‘ಮೇಡೇ ಮೇಡೇ ಮೇಡೇ’ ಎಂದು ತುರ್ತು ಸಂದೇಶ ರವಾನಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಎಟಿಸಿಒ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಅಷ್ಟರಲ್ಲಿ ವಿಮಾನ ನಿಲ್ದಾಣದ ಪಕ್ಕದ ಹಾಸ್ಟೆಲ್ ಮೇಲೆ ಅಪ್ಪಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಟ್ ಆಫ್ ಆದ ಇಂಧನ ಸ್ವಿಚ್ಗಳು: ಕಟ್ ಆಫ್ ಆಗಿದ್ದ ಎರಡು ಸ್ವಿಚ್ಗಳನ್ನು ಆನ್ ಮಾಡಿದರೂ, ಒಂದು ಎಂಜಿನ್ಗೆ ಅಲ್ಪ ಪ್ರಮಾಣದಲ್ಲಿ ಇಂಧನ ಸಾಗಿದೆ. ಇನ್ನೊಂದಕ್ಕೆ ಸಂಪೂರ್ಣವಾಗಿ ಇಂಧನ ಸರಬರಾಜಾಗಿಲ್ಲ. 30 ಸೆಕೆಂಡುಗಳ ಒಳಗೆ ವಿಮಾನವು ಪತನಗೊಂಡಿದೆ. ದುರಂತದ ಸ್ಥಳದಲ್ಲಿ ಸಿಕ್ಕ ಅವಶೇಷಗಳನ್ನು ಸಂಗ್ರಹಿಸಿ, ಅವುಗಳನ್ನು ಮರು ಜೋಡಿಸಿ ತನಿಖೆ ಮಾಡಲಾಗಿದೆ. ಇಂಧನ ಪೂರೈಕೆ ಆಗದೇ ಇರುವುದು ದುರಂತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ.
ಎಎಐಬಿ ಪ್ರಾಥಮಿಕವಾಗಿ ಸಿಕ್ಕ ಎಲ್ಲ ಆಧಾರಗಳ ಮೇಲೆ ಹೆಚ್ಚುವರಿ ವಿವರಗಳನ್ನು ಸಂಗ್ರಹಿಸುತ್ತಿದೆ. ಇಎಎಫ್ಆರ್ನಿಂದ ಡೌನ್‌ಲೋಡ್ ಮಾಡಲಾದ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ತನಿಖೆಯ ಈ ಹಂತದಲ್ಲಿ, B787-8 ಮತ್ತು/ಅಥವಾ GE GEnx-1B ಎಂಜಿನ್ ನಿರ್ವಾಹಕರು ಮತ್ತು ತಯಾರಕರ ಮೇಲೆ ಯಾವುದೇ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ಹೇಳಿದೆ.
Discover more from Coastal Times Kannada
Subscribe to get the latest posts sent to your email.
Discussion about this post