ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ “ಬಾಂಗ್ಲಾದೇಶಿ” ಎಂದು ಆರೋಪಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಜನವರಿ 11 ರಂದು ಸಂಜೆ ಸುಮಾರು 6:05 ಗಂಟೆಗೆ ಜಾರ್ಖಂಡ್ ಮೂಲದ ಕಾರ್ಮಿಕನನ್ನು ತಡೆದು ನಿಲ್ಲಿಸಿದ ನಾಲ್ವರು ಆರೋಪಿಗಳು, “ನೀನು ಬಾಂಗ್ಲಾದೇಶದವನು” ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಕೂಳೂರು ಗ್ರಾಮದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24), ಸಾಗರ್ (24) ಎಂಬವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Crime No: 03/2026), ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 126(2), 352, 351(3), 353, 109, 118(1) ಜೊತೆಗೆ 3(5) ಅಡಿ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಲ್ಲಿ, ಕಾವೂರು ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಎಂ. ಬೈಂದೂರು ಮತ್ತು ತಂಡವು ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಶೋಧ ಮುಂದುವರೆದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post