ಮಂಗಳೂರು: ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಪಶುವೈದ್ಯರ ತಂಡವು ರಕ್ಣಣೆ ಮಾಡಿದೆ. ಚಿರತೆ ಶನಿವಾರ ಬಾವಿಗೆ ಬಿದ್ದಿತ್ತು. ಬಾವಿಗೆ ಬೋನನ್ನು ಇಳಿಸಿ, ಅದರೊಳಗೆ ಚಿರತೆ ಹೋಗುವಂತೆ ಮಾಡಿ ಅದನ್ನು ಹಿಡಿದು ರಕ್ಷಣೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ದಿನವಿಡೀ ಪ್ರಯತ್ನಿಸಿದ್ದರು. ಆದರೆ, ಈ ಪ್ರಯತ್ನ ಫಲಪ್ರದ ಆಗಿರಲಿಲ್ಲ. ಬಳಿಕ ಚಿರತೆ ರಕ್ಷಣಾ ಕಾರ್ಯಕ್ಕೆ ವನ್ಯಜೀವಿ ರಕ್ಷಣಾ ಕಾರ್ಯದಲ್ಲಿ ಪಳಗಿರುವ ಪಶುವೈದ್ಯರ ಮೊರೆ ಹೋಗಲಾಗಿತ್ತು.
ಪಶುವೈದ್ಯರ ತಂಡವು ಬಾವಿಯಲ್ಲೆ ಚಿರತೆಯ ಸ್ಮೃತಿ ತಪ್ಪಿಸಿ, ಬಳಿಕ ಬೋನಿನ ಮೂಲಕ ಅದನ್ನು ಮೇಲಕ್ಕೆತ್ತುವ ಕಾರ್ಯತಂತ್ರ ರೂಪಿಸಿತು. ಆದರೆ, ಬಾವಿಯು ಸಾಕಷ್ಟು ಆಳ ಇದ್ದುದರಿಂದ ಹಾಗೂ ಬಾವಿಯ ತಳ ಭಾಗದಲ್ಲಿ ಚಿರತೆ ಅಡಗಿ ಕುಳಿತಿದ್ದುದರಿಂದ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡುವುದು ಸುಲಭವಾಗಿರಲಿಲ್ಲ. ಸಾಕಷ್ಟು ಸಮಾಲೋಚನೆ ಬಳಿಕ , ಪಶುವೈದ್ಯ ರಾದ ಡಾ. ಮೇಘನಾ ಅವರನ್ನು ಬೋನಿನಲ್ಲಿ ಬಾವಿಯೊಳಗೆ ಇಳಿಸಿ, ಅಲ್ಲೇ ಅವರು ಚಿರತೆಗೆ ಅರಿವಳಿಕೆ ಮದ್ದು ನೀಡಲು ನಿರ್ಧರಿಸಲಾಯಿತು.


ಅರಿವಳಿಕೆ ಮದ್ದು ಹಾರಿಸುವ ಕೋವಿಯೊಂದಿಗೆ ಬೋನು ಸೇರಿದ ಡಾ.ಮೇಘನಾ ಅವರನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗಗಳ ನೆರವಿನಿಂದ ಬಾವಿಯೊಳಕ್ಕೆ ನಿಧಾನವಾಗಿ ಇಳಿಸಿದರು. ಡಾ.ಮೇಘನಾ ಅವರು ಚಿರತೆಯ ಸಮೀಪಕ್ಕೆ ಸಾಗಿ ಅದರತ್ತ ಅರಿವಳಿಕೆ ಚುಚ್ಚುಮದ್ದು ಹಾರಿಸಿದರು. ಚಿರತೆ ಸಂಪೂರ್ಣ ಸ್ಮೃತಿ ತಪ್ಪಿರುವುದನ್ನು ಖಾತರಿಪಡಿಸಿಕೊಂಡ ಬಳಿಕ ಅದನ್ನು ಬೋನಿನೊಳಕ್ಕೆ ಹಾಕಿದರು. ಚಿರತೆ ಹಾಗೂ ಡಾ.ಮೇಘನಾ ಅವರಿದ್ದ ಬೋನನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲಕ್ಕೆತ್ತಿದರು.
ಡಾ ಮೇಘನಾ ಪೆಮ್ಯಯ್ಯ, ಡಾ.ಯಶಸ್ವಿ ನಾರಾವಿ, ಡಾ ಪೃಥ್ವಿ ಮತ್ತು ಡಾ. ನಫೀಸಾ ನೇತೃತ್ವದ ಮಂಗಳೂರಿನ ಚಿಟ್ಟೆಪಿಲಿ ರಕ್ಷಣಾ ತಂಡವು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರ ಸಹಾಯದಿಂದ ಸುಮಾರು ಒಂದು ವರ್ಷ ಪ್ರಾಯ ಚಿರತೆಯನ್ನು ಸುರಕ್ಷಿತ ವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಬಾವಿಗೆ ಬಿದ್ದ ಚಿರತೆಯನ್ನು ನೋಡಲು ಸಾವಿರಾರು ಜನ ಸ್ಥಳದಲ್ಲಿ ಸೇರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post