ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠದಿಂದ ನಿರ್ಗಮಿಸುವ ನಿರ್ಧಾರ ಕೈಗೊಂಡಿರುವ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅವರು ಶೀಘ್ರದಲ್ಲೇ ಉತ್ತರ ಕರ್ನಾಟಕದ ಖ್ಯಾತ ಜಗದ್ಗುರು ಪೀಠವೊಂದರ ಪೀಠಾಧಿಪತಿಯಾಗಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರವಿವಾರ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಶ್ರೀ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ತಮ್ಮ ಮುಂದಿನ ಜಗದ್ಗುರು ಮಠದ ಹೆಸರನ್ನು ಬಹಿರಂಗಪಡಿಸಲಿಲ್ಲ. ಬೆಳಗಾವಿ ಜಿಲ್ಲೆಯ ಪ್ರಭಾವಿ ಜಗದ್ಗುರು ಪೀಠಕ್ಕೆ ತಾನು ತೆರಳುತ್ತಿರುವೆ. ತಮ್ಮ ನಿರ್ಧಾರಕ್ಕೆ ಭಕ್ತರು , ಹಿತೈಷಿಗಳು ತಮಗೆ ಅನುಮತಿ ನೀಡುವಂತೆ ಮನವಿ ಮಾಡಿದರು.
2006ರಿಂದ ಇಂದಿನವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಾತ್ಮಿಕ ತರಂಗಗಳಿಂದ ಕೂಡಿದ ಶಾಂತ-ಸುಂದರ ಪರಿಸರದಲ್ಲಿ ನನ್ನ ಜೀವನ ದಿವ್ಯತ್ರಯರ ಅಪಾರ ಅನುಗ್ರಹ ಹಾಗೂ ಕೃಪೆಯಿಂದ ರೂಪುಗೊಂಡಿದೆ. ಶ್ರೀಮಠದಲ್ಲಿರುವ ಹಿರಿಯ ಸನ್ಯಾಸಿಗಳೂ, ಸಹೋದರ ಸನ್ಯಾಸಿಗಳೂ ಆಗಾಗ ಮಾರ್ಗದರ್ಶನ ನೀಡಿದ್ದಾರೆ. ಅವರಿಗೂ ನಾನು ಪ್ರಣಾಮಪೂರ್ವಕ ಧನ್ಯವಾದಗಳನ್ನು ಸಲ್ಲಿಸುವೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನಲ್ಲಿ ನಾನು ಕಳೆದ 15 ವರ್ಷಗಳ ಅವಧಿಯಲ್ಲಿ ಪ್ರಮುಖವಾಗಿ ಕಾರ್ಯಕ್ರಮ ಸಂಯೋಜಕನಾಗಿ ಸೇವೆ ಸಲ್ಲಿಸಿದ್ದೇನೆ. ನಾವು ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳಿಗೆ ಮಾಧ್ಯಮದವರು ವಿಶೇಷವಾಗಿ ಪತ್ರಿಕಾರಂಗ ನೀಡಿದ ಪ್ರೋತ್ಸಾಹ ಹಾಗೂ ಸಹಕಾರಗಳನ್ನು ಅತ್ಯಂತ ಗೌರವದಿಂದ ಸ್ಮರಿಸಿಕೊಂಡು ಧನ್ಯವಾದಗಳನ್ನು ಅರ್ಪಿಸುವೆ.
2014ರಿಂದ ಆರಂಭಿಸಿ ಇಂದಿನವರೆಗೆ ಹಲವು ವರ್ಷಗಳಿಂದ ನನ್ನನ್ನು ಬೇರೆ ಬೇರೆ ಮಠಗಳಿಗೆ, ಸಂಸ್ಥಾನಗಳಿಗೆ, ಪೀಠಗಳಿಗೆ ಉತ್ತರಾಧಿಕಾರಿಯಾಗಿ ಪೀಠಾಧಿಪತಿಯಾಗಿ ಎಂದು ಹಿರಿಯ ಸನ್ಯಾಸಿಗಳಾದಿಯಾಗಿ ಅನೇಕ ಭಕ್ತ ವೃಂದ ನನ್ನಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದರು. ಕಳೆದ ನಾಲ್ಕಾರು ತಿಂಗಳುಗಳವರೆಗೂ ನಾನು ಆ ಎಲ್ಲ ಅವಕಾಶಗಳನ್ನು ನಯವಾಗಿ ತಿರಸ್ಕರಿಸುತ್ತ ಬಂದಿದ್ದೆ. ಆದರೆ ಇವುಗಳು ಮತ್ತೆ ಮತ್ತೆ ಹುಡುಕಿ ಬರಲಾಗಿ ನನಗೆ ಮತ್ತೆ ಸ್ವಲ್ಪ ಈ ವಿಚಾರವಾಗಿ ನಮ್ಮ ಮಠದ ಅನೇಕ ನನಗಿಂತ ಹಿರಿಯ ಸನ್ಯಾಸಿಗಳ ಬಳಿ ಹಾಗೂ ನನ್ನ ಸಹೋದರ ಸನ್ಯಾಸಿಗಳ ಹತ್ತಿರ ಈ ವಿಚಾರ ವಿನಿಮಯ ಮಾಡಿಕೊಂಡು ಅವರ ಸಮ್ಮತಿಯೊಂದಿಗೆ ನಾನು ಹೊಸ ಪರಂಪರೆಗೆ ಹೋಗಲು ಮನಸ್ಸು ಮಾಡಿದ್ದೇನೆ. ಉತ್ತರ ಕರ್ನಾಟಕದ ಪ್ರಮುಖ ಜಗದ್ಗುರು ಪೀಠಕ್ಕೆ ನಾನು ತೆರಳುತ್ತಿರುವೆ. ಈ ಹೊತ್ತಿನಲ್ಲಿ ರಾಮಕೃಷ್ಣ ಮಠದ ವ್ಯವಸ್ಥೆಯಿಂದ ನಿರ್ಗಮಿಸುವ ಹೊತ್ತಿನಲ್ಲಿ ಸಹಜವಾಗಿ ಒಂದಿಷ್ಟು ಜನರಿಗೆ ಬೇಸರವಾಗಬಹುದು, ಅದು ಸಹಜವೂ ಹೌದು, ಆದರೆ ಇದನ್ನು ಸಾಕಷ್ಟು ವಿಚಾರ ವಿನಿಮಯ ಮಾಡಿ ಚಿಂತನ ಮಂಥನ ನಡೆಸಿ ತೆಗೆದುಕೊಂಡಿರುವ ನನ್ನ ತೀರ್ಮಾನಕ್ಕೆ ತಾವು ಸಮ್ಮತಿ ಸೂಚಿಸಬೇಕು ಎಂದು ಆಶ್ರಮದ ಭಕ್ತರಲ್ಲಿ, ಸ್ವಚ್ಛ ಮಂಗಳೂರು ಕಾರ್ಯಕರ್ತರಲ್ಲಿ, ನನ್ನ ಹಿತೈಷಿಗಳಲ್ಲಿ ಹಾಗೂ ಮಂಗಳೂರಿನ ಸಮಸ್ತ ಜನತೆಯಲ್ಲಿ ವಿನಂತಿ ಮಾಡುವೆ. ಕಳೆದೆರಡು ಮೂರು ತಿಂಗಳಗಳು ನನ್ನ ಜೀವನದ ಬದಲಾವಣೆಯ ಪರ್ವಕಾಲದಲ್ಲಿ ನನ್ನೊಂದಿಗೆ ಗಟ್ಟಿಯಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಾನು ಎಂದೆಂದಿಗೂ ಚಿರಋಣಿ.
2006 ರಿಂದ 2023, ಮಂಗಳೂರಿನ ನನ್ನ ಜೀವನ ಸೇವೆಯಲ್ಲಿಯೇ ಸಾರ್ಥಕತೆ ಎಂಬ ಭಾವವನ್ನು ಜಾಗೃತಗೊಳಿಸಿದೆ. ಸುಮಾರು 300 ಕ್ಕೂ ಅಧಿಕ ಸಭಾ ಕಾರ್ಯಕ್ರಮಗಳನ್ನು ಭಕ್ತರಿಗಾಗಿ, ಯುವಜನತೆಗಾಗಿ, ಶಿಕ್ಷಕರಿಗಾಗಿ, ಉಪನ್ಯಾಸಕರಿಗಾಗಿ, ವೃತ್ತಿಪರರಿಗೆ ಶ್ರೀ ಮಠದಲ್ಲಿಯೇ ಆಯೋಜಿಸಿ ಸಂಘಟಿಸುವಲ್ಲಿ ನನಗೆ ಮಠ ನೀಡಿದ ಜವಾಬ್ದಾರಿಯನ್ನು ಶ್ರದ್ಧಾಭಕ್ತಿಗಳಿಂದ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಈ ಮಧ್ಯದಲ್ಲಿ 2009 ರಿಂದ 2011 ರವರೆಗೆ ನಾನು ರಾಮಕೃಷ್ಣ ಮಿಷನ್ನಿನ ಪ್ರಧಾನ ಕೇಂದ್ರ ಕಲ್ಕತ್ತದಲ್ಲಿರುವ ಬೇಲೂರು ಮಠದಲ್ಲಿ ವಿಶೇಷ ತರಭೇತಿ ಪಡೆದು ಮತ್ತೆ 2011 ರಿಂದ ಮಂಗಳೂರಿನಲ್ಲಿ ಸೇವಾತತ್ಪರನಾಗಿದ್ದೇನೆ.
2011 ರಿಂದ 2014 ಸ್ವಾಮಿ ವಿವೇಕಾನಂದರ ನೂರೈವತ್ತನೇ ಜನೋತ್ಸವವನ್ನು ಸರಿ ಸುಮಾರು 125 ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನಮಾನಸದಲ್ಲಿ ವಿವೇಕಾನಂದರ ಜೀವನ ಸಂದೇಶಗಳನ್ನು ಪ್ರಸಾರ ಮಾಡಲು ಸಹಕಾರಿಯಾಗಿದೆ. 10 ಸಾವಿರ ಯುವಕರ ಜಾಥಾ ಹಾಗೂ ಮೂರು ದಿನಗಳ ಯುವ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವ ಜವಾಬ್ದಾರಿ ಸ್ಮರಣೀಯವಾದವುಗಳು.
ಇನ್ನು ಸ್ವಚ್ಛ ಭಾರತದ ಮುಂದುವರೆದ ಭಾಗವಾಗಿ ಮಂಗಳಾ ರಿಸೋರ್ಸ್ ಮೆನೆಜ್ ಮೇಂಟ್ ಎನ್ನುವ ಸ್ಟಾರ್ಟ್ ಅಪ್ ನನ್ನ ಪರಿಕಲ್ಪನೆಯಲ್ಲಿ ಬೆಳೆದ ಕೂಸು. ಕಸದ ವೈಜ್ಞಾನಿಕ ನಿರ್ವಹಣೆ, ಹಸಿರು ಉದ್ಯೋಗ ಸೃಷ್ಟಿ, ದೇಶದ ಸಂಪನ್ಮೂಲದ ಮರುಬಳಕೆ, ಪರಿಸರ ಸ್ನೇಹಿ ಪರಿಕರಗಳ ಬಳಕೆ, ಪರಿಸರ ಸಂರಕ್ಷಣೆ ಒಟ್ಟಾರೆ ದೇಶದ ಬಹು ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸುವ ಸಂಸ್ಥೆಯನ್ನು ಹುಟ್ಟು ಹಾಕಿರುವುದಕ್ಕೆ ಹೆಮ್ಮೆಯಿದೆ. ಇಂದು ಆ ಸಂಸ್ಥೆಯಲ್ಲಿ ನೇರವಾಗಿ 60 ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಇತ್ತೀಚಿಗಷ್ಟೇ ಅದಕ್ಕೊಂದು ಸುವ್ಯವಸ್ಥಿತ ಕಾರ್ಪೋರೆಟ್ ಕಚೇರಿಯನ್ನು ನನ್ನ ಪರಿಕಲ್ಪನೆಯಲ್ಲಿ ರೂಪಿಸಿ ಉದ್ಘಾಟಿಸಲಾಗಿದೆ. ಮುಂದೆ ಇದೊಂದು ಮಂಗಳೂರಿಗರ ಹೆಮ್ಮೆಯ ಸಂಸ್ಥೆಯಾಗಬೇಕು ದೇಶಕ್ಕೆ ಮಾದರಿಯಾಗಬೇಕು ಎನ್ನುವ ಮಹಾದಾಸೆ ನನ್ನದು, ಅದರ ವ್ಯವಸ್ಥೆಗೆ ನಿರ್ದೇಶಕರನ್ನು ನಿಯೋಜಿಸಲಾಗಿದ್ದು ಅವರೆಲ್ಲ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಲು ಶಕ್ತರಾಗಿದ್ದಾರೆ ಎಂದು ಭಾವಿಸುವೆ.
ಇನ್ನು ಸ್ವಚ್ಛ ಮಂಗಳೂರು ಫೌಂಡೇಶನ್ ಎಂಬ ಸಂಸ್ಥೆಯನ್ನು ಆಸಕ್ತ ಸ್ವಯಂಸೇವಕರ ಮೂಲಕ ರೂಪಿಸಲಾಗಿದೆ. ಆ ಸಂಸ್ಥೆಯ ಸ್ವಚ್ಛತಾ ಕಾರ್ಯಗಳು ಶ್ರಮದಾನಗಳು ಹಾಗೂ ಇನ್ನಿತರ ಸೇವಾ ಚಟುವಟಿಕೆಗಳು ನಡೆಯಲಿವೆ. ಹೀಗೆ ಇಂತಹ ಕಾರ್ಯಗಳನ್ನು ದೇವರು ನನ್ನ ಮೂಲಕ ಮಾಡಿಸಿಕೊಂಡ ಎನ್ನುವುದೇ ಜೀವನದ ಸಾರ್ಥಕತೆ. ಹದಿನಾರು ವರ್ಷಗಳ ಕಾಲ ಮಂಗಳೂರು ಜನತೆ ನೀಡಿದ ಪ್ರೀತಿ ವಿಶ್ವಾಸ ಸ್ನೇಹ ಸಹಕಾರಗಳಿಗೆ ನಾನು ಸದಾ ಋಣಿಯಾಗಿರುವೆ.
Discover more from Coastal Times Kannada
Subscribe to get the latest posts sent to your email.








Discussion about this post