ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಅಸಹಾಯಕರಾಗಿದ್ದ ಮಹಿಳೆ ಹಾಗೂ ಮೂರು ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.
ಮಹಿಳೆಯು ಮೂರು ಜನ ಚಿಕ್ಕ ಮಕ್ಕಳೊಂದಿಗೆ ದುಃಖಿತರಾಗಿ ನಿಂತಿದ್ದವರನ್ನು ಅಲ್ಲಿಯೇ ರೌಂಡ್ಸ್ ಕರ್ತವ್ಯದಲ್ಲಿದ್ದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಎಸ್ಐ ಮುಕ್ತ ಬಾಯಿ ಮತ್ತು ಕೋಡಿ ಬೀಟ್ ಸಿಬ್ಬಂದಿ ಗೋಪಾಲ ಖಾರ್ವಿ ಅವರು ಗಮನಿಸಿ ವಿಚಾರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿಯ ಸ್ಲಂ ನಿವಾಸಿ ಬದ್ರೇಶ್ ಅವರ ಪತ್ನಿ ಸಂಗೀತ (27) ಹಾಗೂ ಜತೆಯಲ್ಲಿ ಮಗ ಅಜಯ (9), ಮಗಳು ಖುಷಿ (8) ಮತ್ತು ಮಗಳು ರೋಜಾ (5) ಜೀವನದಲ್ಲಿ ಯಾರು ದಿಕ್ಕು ದೆಸೆ ಇಲ್ಲದೆ ನಿರ್ಗತಿಕರಾಗಿ ಅಲೆಮಾರಿ ಜೀವನ ನಡೆಸುತ್ತಿದ್ದರು.
ಮಹಿಳೆ ತನ್ನ ಮತ್ತು ಮಕ್ಕಳ ಜೀವನದ ಮುಂದಿನ ಭವಿಷ್ಯಕ್ಕಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ತನಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಾಗ , ಮುಕ್ತ ಬಾಯಿ ಹಾಗೂ ಗೋಪಾಲ ಖಾರ್ವಿ ಅವರು ಮಹಿಳೆ ಮತ್ತು ಮಕ್ಕಳ ಜೊತೆಗೆ ಸಮಾಲೋಚನೆ ನಡೆಸಿ, ಕೋಡಿಯ ಸಮಾಜ ಸೇವಕ ಅಶೋಕ್ ಪೂಜಾರಿ ಅವರ ಸಹಕಾರದೊಂದಿಗೆ ಮಕ್ಕಳನ್ನು ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ದಾಖಲು ಮಾಡಿದರು. ತಾಯಿ ಸಂಗೀತಳಿಗೆ ಆಶ್ರಯ ಮತ್ತು ಕೆಲಸ ಕೊಡುವುದಾಗಿ ಕೋಡಿ ಸೀ ವಾಕ್ ರೆಸ್ಟೊ ಕೆಫೆ ನಡೆಸಿಕೊಂಡಿರುವ ಜ್ಯೋತಿ ಮತ್ತು ವಿಕಾಸ್ ದಂಪತಿ ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡರು. ಅದರಂತೆ ಮಹಿಳೆಯ ಒಪ್ಪಿಗೆಯ ಮೇರೆಗೆ ಅವರ ಜತೆಯಲ್ಲಿ ಇರಿಸಲಾಯಿತು. ಪೊಲೀಸರ ಈ ಸಮಯೋಚಿತ ನಿರ್ಧಾರ ಮತ್ತು ಸಾರ್ವಜನಿಕರ ಸಹಕಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post