ಮಂಗಳೂರು, ಮಾ.13 : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು, ಅಕ್ರಮ ಪಿಸ್ತೂಲ್ ಸಾಗಾಟ ಪ್ರಕರಣ ಸಂಬಂಧಿಸಿ ಕೇರಳ- ಕರ್ನಾಟಕ ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರು ಪಿಸ್ತೂಲ್, 6 ಸಜೀವ ಮದ್ದುಗುಂಡುಗಳು ಹಾಗೂ 12.895 ಕೇಜಿ ಗಾಂಜಾ, ಮೂರು ಕಾರು, ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬುಧವಾರ ಮತ್ತು ಗುರುವಾರ ನಾಟೆಕಲ್, ತಲಪಾಡಿ, ಅರ್ಕುಳದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿತರ ಪೈಕಿ ಒಬ್ಬಾತನಿಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಜೊತೆ ನಂಟು ಇದೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದೇರಳಕಟ್ಟೆ ಸಮೀಪದ ನಾಟೆಕಲ್ ಬಳಿ ಸ್ಥಾರ್ಪಿಯೋ ಕಾರೊಂದು ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಾ.12ರಂದು ದಾಳಿ ನಡೆಸಿ ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಕಕ್ಕಾಡಿನಗತ್ ಮನೆಯ ನೌಫಲ್(38), ಪೈವಳಿಕೆ ಗ್ರಾಮದ ಮನ್ಸೂರ್(36) ಎಂಬವರನ್ನು ಬಂಧಿಸಿ 2 ಪಿಸ್ತೂಲ್ ಗಳು, 4 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಪೋನುಗಳು, ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 14,60,000 ರೂ. ಆಗಿದೆ. ಈ ಬಗ್ಗೆ ಕೊಣಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೌಫಲ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿದೆ. ಮನ್ಸೂರ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ಸಹಿತ 4 ಪ್ರಕರಣ ದಾಖಲಾಗಿದೆ.
ಕೇರಳದಿಂದ ಮಂಗಳೂರಿಗೆ ಗಾಂಜಾ ಮಾರಾಟ ಮಾಡಲು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಾ.12ರಂದು ನಗರ ಹೊರವಲಯದ ಅರ್ಕುಳದಲ್ಲಿ ಕಾರನ್ನು ಪತ್ತೆ ಹಚ್ಚಿ ಆರೋಪಿ ಮೂಲತಃ ಕಾಸರಗೋಡು ಜಿಲ್ಲೆಯ ಬಂದ್ಯೋಡ್‌ನ ಪ್ರಸಕ್ತ ಕೋಝಿಕ್ಕೋಡ್‌ನಲ್ಲಿ ವಾಸವಾಗಿದ್ದ ಅಬ್ದುಲ್ ಲತೀಫ್ ಯಾನೆ ತೋಕು ಲತೀಶ್ (29) ಎಂಬಾತನನ್ನು ಬಂಧಿಸಿದರು. ಆರೋಪಿಯಿಂದ ಸ್ವಿಫ್ಟ್ ಕಾರು, 12.895 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 15,70.000 ಲಕ್ಷ ರೂ. ಆಗಬಹುದು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಆರೋಪಿ ಅಬ್ದುಲ್ ಲತೀಫ್ ಎಂಬಾತನ ವಿರುದ್ಧ ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನೀಡಿದ ಆರೋಪವಿದೆ. 2024ರಲ್ಲಿ ಉಳ್ಳಾಲದಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಟರ್ ಎಂಬಾತ ನಿಗೂ ಈತನು ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪವಿದೆ. ಈ ಪ್ರಕರಣಗಳಲ್ಲಿ ಈತನು ತಲೆಮರೆಸಿ ಕೊಂಡಿದ್ದನು. ಈತನ ವಿರುದ್ಧ ಈ ಹಿಂದೆ ಕೇರಳ ಹಾಗೂ ಕರ್ನಾಟಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಕೃತ್ಯ ಸಹಿತ 13 ಪ್ರಕರಣಗಳು ದಾಖಲಾಗಿದೆ.
ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿ ಪರಿಸರದಲ್ಲಿ ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಕಾರಿನಲ್ಲಿ ಇಬ್ಬರು ಯಾವುದೋ ಕೃತ್ಯವೆಸಗಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತಲಪಾಡಿ ದೇವಿಪುರದ ಬಳಿ ಕಾರನ್ನು ಪತ್ತೆ ಹಚ್ಚಿ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮೊರ್ತಾನ ಮನೆಯ ಅಸ್ಗರ್ (27), ಹಾಗೂ ಸಾಲಿ (31) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1ಪಿಸ್ತೂಲ್, 2 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನುಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ 10,20,000 ಲಕ್ಷ ರೂ. ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಅಸ್ಗರ್ ಎಂಬಾತನ ವಿರುದ್ಧ ಹಲ್ಲೆ, ದರೋಡೆ, ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ ಹಾಗೂ ಕರ್ನಾಟಕದಲ್ಲಿ 17 ಪ್ರಕರಣಗಳು ದಾಖಲಾಗಿದೆ. ಸಾಲಿ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ 10 ಪ್ರಕರಣಗಳು ದಾಖಲಾಗಿದೆ.
ಒಟ್ಟಿನಲ್ಲಿ 3 ಪ್ರಕರಣಗಳಲ್ಲಿ 3 ಪಿಸ್ತೂಲ್‌ಗಳು, 6 ಸಜೀವ ಮದ್ದುಗುಂಡುಗಳು, 12.895 ಕೆಜಿ ಗಾಂಜಾ, 5 ಮೊಬೈಲ್ ಫೋನುಗಳು ಹಾಗೂ 3 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 40,50,000 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಕರಣಗಳಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್, ಕೆ. ರವಿಶಂಕರ್, ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಎಸ್ಸೈ ಶರಣಪ್ಪಭಂಡಾರಿ, ಎಎಸ್ಸೈ ಮೋಹನ್ ಕೆ.ವಿ. ಸುಜನ್ ಶೆಟ್ಟಿ ಮತ್ತಿತರು ಸಿಬ್ಬಂದಿಗಳು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post