ಮಂಗಳೂರು, ಜೂನ್ 13: ಮಂಗಳೂರಿನಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ಹೊಸ ತಂಡವೊಂದು ರೆಡಿಯಾಗಿದೆ. ‘ಸ್ಪೆಷಲ್ ಆ್ಯಕ್ಷನ್ ಫೋರ್ಸ್’ ಇಂದು ಅಸ್ತಿತ್ವಕ್ಕೆ ಬಂದಿದೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೂತನ ಸ್ಟ್ರೈಕಿಂಗ್ ಫೋರ್ಸ್‌ಗೆ ಚಾಲನೆ ನೀಡಿದರು. ಹಾಗಾದರೆ ಈ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಹೇಗಿರುತ್ತೆ, ಇದರ ಕಾರ್ಯ ಚಟುವಟಿಕೆಗಳೇನು ಎಂದು ತಿಳಿಯಿರಿ.
ಕೋಮುದಳ್ಳುರಿಗೆ ಸಿಲುಕಿದ್ದ ಮಂಗಳೂರಿಗೆ ನೂತನ ಪೊಲೀಸ್ ಪಡೆಯ ಆಗಮನವಾಗಿದೆ. ರಾಜ್ಯ ಸರ್ಕಾರ ಕೊನೆಗೂ ಕೊಟ್ಟ ಮಾತಿನಂತೆ ಕೋಮು ಸಂಘರ್ಷದ ನೆಲದಲ್ಲಿ ಹೊಸ ತಂಡವನ್ನು ಹುಟ್ಟುಹಾಕಿದೆ. ಸ್ಪೆಷಲ್ ಆಕ್ಷನ್ ಫೋರ್ಸ್ ಎಂಬ ಪೊಲೀಸ್ ಪಡೆ ಮಂಗಳೂರಿನಲ್ಲಿ ಇಂದಿನಿಂದ ಅಸ್ತಿತ್ವಕ್ಕೆ ಬರಲಿದ್ದು, ಕಿಡಿಗೇಡಿಗಳ ಹುಟ್ಟಡಗಲಿಸಿದೆ. ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆಕ್ಷನ್ ಫೋರ್ಸ್‌ಗೆ ಈಗಾಗಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ.
ಎಎನ್ಎಫ್ ನಿಂದ ಎಸ್ಎಎಫ್ಗೆ ಸಿಬ್ಬಂದಿಗಳು: ಕಾರ್ಕಳದಲ್ಲಿ ಕೇಂದ್ರ ಸ್ಥಾನದಲ್ಲಿರುವ ನಕ್ಸಲ್ ನಿಗ್ರಹ ದಳ ( ಎಎನ್ಎಫ್ ) ದ 656 ಸಿಬ್ಬಂದಿಗಳಲ್ಲಿ 248 ಸಿಬ್ಬಂದಿಗಳನ್ನು ಎಸ್ಎಎಫ್ಗೆ ನಿಯೋಜಿಸಲಾಗಿದೆ. ಇದರಲ್ಲಿ ಡಿಐಜಿಪಿ 1, ಡಿವೈಎಸ್ಪಿ ಸಿವಿಲ್ 1, ಸಹಾಯಕ ಕಮಾಂಡೆಂಟ್ 1, ಪಿಐ/ ಆರ್ಪಿಐ 4, ಪಿಎಸ್ಐ/ ಆರ್ಎಸ್ಐ/ ಎಸ್ಐ 16, ಸಿಹೆಚ್ಸಿ 60 , ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಇರಲಿದ್ದಾರೆ. ಇದರಲ್ಲಿ ಮಂಗಳೂರು ಕೇಂದ್ರ ಸ್ಥಾನದಲ್ಲಿ ಡಿಐಜಿಪಿ 1, ಎಸ್ಪಿ 1, ಡಿವೈಎಸ್ಪಿ 1, ಸಹಾಯಕ ಕಮಾಂಡೆಂಟ್ 1, ಪಿಐ/ಆರ್ಪಿಐ 1, ಪಿಎಸ್ಐ, ಆರ್ಎಸ್ಐ, ಎಸ್ಐ 1, ಸಿಹೆಚ್ಸಿ 3 , ಪಿಸಿಪಿ, ಎಪಿಸಿ 6 ಇದ್ದು, ಒಟ್ಟು 15 ಮಂದಿ ಇರಲಿದ್ದಾರೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ತಲಾ ಒಂದು ಪಿಐ/ ಆರ್ಪಿಐ, 5 ಪಿಎಸ್ಐ / ಆರ್ಎಸ್ಐ / ಎಸ್ಐ, 19 ಸಿಹೆಚ್ಸಿ , 48 ಸಿಪಿಸಿ/ಎಪಿಸಿ ಮತ್ತು 5 ಅನುಯಾಯಿ ಇರಲಿದ್ದಾರೆ. ಮೂರು ಜಿಲ್ಲೆಗೂ ತಲಾ 78 ಸಿಬ್ಬಂದಿಗಳು ಇರಲಿದ್ದಾರೆ.
ಯಾರೇ ಮತೀಯ ದ್ವೇಷ ಹರಡಿಸಿದರೂ ಹತ್ತಿಕ್ಕುವ ಕೆಲಸವನ್ನು ಈ ಕಾರ್ಯಪಡೆ ಮಾಡಲಿದೆ. ಇಷ್ಟು ದಿನ ಶಾಂತವಾಗಿಯೇ ಪೊಲೀಸರು ಈ ಕೆಲಸ ಮಾಡುತ್ತಿದ್ದರು. ಆದರೆ ಶಾಂತಿಯ ವರ್ತನೆಯಿಂದ ಕೆಲವರು ಮನಸ್ಸು ಪರಿವರ್ತಿಸಿಲ್ಲ. ಹಾಗಾಗಿ ಕಾರ್ಯಪಡೆ ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಜನಸಾಮಾನ್ಯರಲ್ಲಿ ಒಂದು ಪ್ರಾರ್ಥನೆ ಮಾಡುತ್ತೇನೆ, ದಯವಿಟ್ಟು ಈ ಫೋರ್ಸ್ ಗೆ ಕೆಲಸ ಕೊಡಬೇಡಿ. ನೀವಾಗಿಯೇ ಸುಮ್ಮಿನಿದ್ದರೆ ಈ ಫೋರ್ಸ್ ಕೆಲಸ ಮಾಡೋಕೆ ಬರಲ್ಲ. ಆದರೆ ನಮ್ಮ ಮಾತನ್ನು ಕೇಳದಿದ್ದರೆ ಈ ಫೋರ್ಸ್ ಕೆಲಸ ತೋರಿಸುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಹೊಸ ಕಾರ್ಯಪಡೆ ಬಗ್ಗೆ ಅನೇಕರು ಟೀಕೆ ಮಾಡಬಹುದು. ಆದರೆ ನಮ್ಮ ಸಮಾಜ ಈ ಕಾರ್ಯಪಡೆಯನ್ನು ಒಪ್ಪಿಕೊಳ್ಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ದರೆ, ಇಡೀ ಕರ್ನಾಟಕದಲ್ಲಿ ಶಾಂತಿ ಇರುತ್ತದೆ. ಯಾರು ಕೂಡ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ಸಣ್ಣ ವಿಷಯವನ್ನೇ ದೊಡ್ಡದು ಮಾಡಿ ವಿಭಜನೆ ಮಾಡೋದು ಸರಿಯಲ್ಲ. ಸದ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ ಈ ಕಾರ್ಯಪಡೆ ವ್ಯಾಪ್ತಿ ಇರಲಿದ್ದು ಅಗತ್ಯ ಬಿದ್ದರೆ ಇಡೀ ರಾಜ್ಯದಲ್ಲಿ ಮಾಡುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post