ಮಂಗಳೂರು: ಮಳೆ ಹಾನಿ ವೀಕ್ಷಣೆಗೆ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನ ಉಳ್ಳಾಲದ ಬಟ್ಟಪಾಡಿಯಲ್ಲಿ ಕಡಲ್ಕೊರೆತವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಕಡಲ್ಕೊರೆತದ ತೀವ್ರತೆಯನ್ನು ತಡೆಗಟ್ಟಲು ಸೀ ವೇವ್ ಬ್ರೇಕರ್ ಶೀಘ್ರದಲ್ಲೇ ಅಳವಡಿಸಲಾಗುವುದು. ತಜ್ಞರ ತಂಡವೊಂದು ಈ ತಂತ್ರಜ್ಞಾನ ಮೂಲಕ ಕಡಲ್ಕೊರೆತ ತಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಉಳ್ಳಾಲ ಭಾಗದಲ್ಲಿ ಅನುಷ್ಠಾನ ಮಾಡಲು ಅವರಿಗೆ ಅನುಮತಿ ನೀಡಿದ್ದೇನೆ. ಕಡಲಿನ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳ ಸ್ಥಳಾಂತರ ಮಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಹೇಳಿದರು.
ಸುಳ್ಯದಲ್ಲಿ ಉಂಟಾದ ಭೂಕಂಪದಲ್ಲಿ ಹಾನಿಯಾದ ಪ್ರದೇಶ ಹಾಗೂ ಬಂಟ್ವಾಳದಲ್ಲಿ ಭೂ ಕುಸಿತದ ಪ್ರದೇಶಕ್ಕೂ ಭೇಟಿ ನೀಡಿ ಮಳೆ ಹಾನಿ ವೀಕ್ಷಣೆ ಮಾಡಿದರು. ಭೂಕಂಪ ತಡೆ ಕುರಿತು ಮೂರ್ನಾಲ್ಕು ಸಂಸ್ಥೆಗಳಿಗೆ ಮತ್ತು ಮೈಸೂರು, ಬೆಂಗಳೂರು ವಿವಿಯವರಿಗೆ ಅಧ್ಯಯನಕ್ಕೆ ತಿಳಿಸಿದ್ದು, ಇದರ ಬಗ್ಗೆ ಪೂರ್ಣ ಪ್ರಮಾಣದ ವರದಿ ಸಿಕ್ಕಿದ ಮೇಲೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಭೂಕಂಪ ತಡೆಗಟ್ಟುವ ಜೊತೆಗೆ ಈ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ 40 ಕೋಟಿ ರೂ ಬಿಡುಗಡೆ ಮಾಡಿದೆ. ಇದನ್ನು ಅಧ್ಯಯನಕ್ಕೆ ಉಪಯೋಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ವಿಪಕ್ಷ ಉಪನಾಯಕ ಯು ಟಿ ಖಾದರ್, ಸಚಿವ ಅಂಗಾರ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post