ಮಂಗಳೂರು, ಜುಲೈ.12: ನಗರದ ಕಪಿತಾನಿಯೋ ಬಳಿ ದಿನಸಿ ಅಂಗಡಿಯಿಂದ 10 ಲಕ್ಷ ರು. ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್(27) ಹಾಗೂ ಇಲಿಯಾಸ್ ಖಾನ್(22) ಬಂಧಿತ ಆರೋಪಿಗಳು. ಘಟನೆ ನಡೆದ 16 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಕಂಕನಾಡಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.8 ರಂದು ಕಪಿತಾನಿಯೋ ಸಮೀಪವಿರುವ ಲೋಟಸ್ ಗ್ಯಾಲಕ್ಸಿ ಕಾಂಪ್ಲೆಕ್ಸ್‌ನ ಬಿಎಚ್ ಟ್ರೇಡರ್ಸ್ ಎಂಬ ದಿನಸಿ ಅಂಗಡಿಯ ಶೆಟರ್ ಒಡೆದು ಇಬ್ಬರು ಕಳ್ಳರು ಕ್ಯಾಶ್ ಕೌಂಟರಿನಲ್ಲಿದ್ದ ಸುಮಾರು 10.20 ಲಕ್ಷ ರು. ಮೊತ್ತವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಅಂಗಡಿ ಮಾಲೀಕ ಉಮ್ಮರ್ ಫಾರೂಕ್ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ. ಡಿ. ನಾಗರಾಜ್ ನೇತೃತ್ವದಲ್ಲಿ ತನಿಖಾ ತಂಡ ಪ್ರಕರಣದ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯ ನಡೆದ ಸ್ಥಳ ಮತ್ತು ಪಂಪ್‌ವೆಲ್ ಸುತ್ತಮುತ್ತ ದೊರೆತ ಸಿಸಿಟಿವಿ ಫೂಟೇಜ್ ಆಧಾರ ದಲ್ಲಿ ರಾತ್ರಿ ವೇಳೆ ಸಂಚರಿಸಿದ ಸಂಶಯಿತರ ಬಗ್ಗೆ ರಿಕ್ಷಾ ಚಾಲಕರನ್ನು ಪೊಲೀಸರು ವಿಚಾರಿಸಿದಾಗ ಆ ದಿನ ರಾತ್ರಿ ಇಬ್ಬರು ಹಿಂದಿ ಮಾತನಾಡುವ ಸಂಶಯಿತರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟ ಬಗ್ಗೆ ಮಾಹಿತಿ ದೊರಕಿತ್ತು. ಅದರಂತೆ ರೈಲ್ವೆ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿ ಉತ್ತರ ಭಾರತಕ್ಕೆ ಪ್ರಯಾಣಿಸಬಹುದಾದ ರೈಲುಗಳ ವೇಳಾಪಟ್ಟಿ ಪರಿಶೀಲಿಸಿ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಆ ದಿನ ರಾತ್ರಿ ಇಬ್ಬರು ಮಂಗಳೂರಿನಿಂದ ಪುಣೆಗೆ ಎರಡು ಟಿಕೆಟ್ ಬುಕ್ ಮಾಡಿ ಹೊರಟಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದರು ಎಂದು ಕಮಿಷನ್ ತಿಳಿಸಿದ್ದಾರೆ.
ರಾತ್ರಿ 8:30ರ ವೇಳೆಗೆ ರೈಲು ಮಹಾರಾಷ್ಟ್ರದ ಸತಾರ ದಾಟಿ ಮುಂದೆ ಹೋಗುತ್ತಿದ್ದು, 11:45ರ ಸುಮಾರಿಗೆ ಪುಣೆ ತಲು ಪುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಮಂಗಳೂರಿನ ಆರ್‌ಪಿಎಫ್ ಪೊಲೀಸರ ಮೂಲಕ ಪುಣೆ ಆರ್‌ಪಿಎಫ್ ಪೊಲೀಸರನ್ನು ಸಂಪರ್ಕಿಸಿ ವ್ಯಕ್ತಿಗಳ ಚಹರೆ, ಧರಿಸಿದ ಬಟ್ಟೆಗಳ ಬಗ್ಗೆ ಮಾಹಿತಿ ರವಾನಿಸಿ ವಶಕ್ಕೆ ಪಡೆಯಲು ಸೂಚಿಸಿ ದ್ದರು. ಅಲ್ಲದೆ ತಾನು ಪುಣೆಯ ಜಿಆರ್‌ಪಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಅದರಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದರು.
ರಾತ್ರಿ 11:45ರ ವೇಳೆಗೆ ಪುಣೆಯ ಆರ್‌ಪಿಎಫ್ ಹಾಗೂ ಜಿಆರ್‌ಪಿ ಪೊಲೀಸರು ಇಬ್ಬರು ಸಂಶಯಿತರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ಎಸ್ಸೈ ಶಿವಕುಮಾರ್, ಸಿಬ್ಬಂದಿ ಗಳಾದ ಜಯಾನಂದ, ರಾಜೇಸಾಬ್ ಮುಲ್ಲಾ, ಚೇತನ್, ಪ್ರವೀಣ್ ತಂಡವು ಪುಣೆಗೆ ತೆರಳಿ ಜಿಆರ್‌ಪಿ ಪೊಲೀಸರ ವಶದ ಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ. ಆರೋಪಿಗಳು ರೈಲ್ವೆ ಫ್ಲ್ಯಾಟ್‌ಫಾರ್ಮ್‌ನ ಬೇರೊಂದು ಕಡೆ ಹಣದ ಬ್ಯಾಗ್‌ನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದರು. ಈ ವೇಳೆ ಕಳವುಗೈದ 1.13 ಲಕ್ಷ ರೂ. ನಗದನ್ನು ವಶಪಡಿಸಲಾಗಿದೆ. ನಂತರ ಪುಣೆ ನ್ಯಾಯಾಲಯದಲ್ಲಿ ಟ್ರಾನ್ಸಿಟ್ ವಾರೆಂಟ್ ಪಡೆದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಉತ್ತರ ಪ್ರದೇಶದ ಹಲವರು ಮಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಮಂಗಳೂರು ಶ್ರೀಮಂತ ನಗರವಾಗಿದೆ. ಇಲ್ಲಿ ಕೇಟರಿಂಗ್ ಅಥವಾ ಬೇರೆ ಯಾವುದಾದರು ಕೆಲಸ ಮಾಡುವುದಕ್ಕಾಗಿ ಬಂದೆವು. ಆದರೆ ಕೆಲಸ ಸಿಗದ ಕಾರಣ ಮತ್ತು ತಮ್ಮಲ್ಲಿದ್ದ ಹಣ ಖರ್ಚಾಗಿದ್ದರಿಂದ ಯಾವುದಾದರೂ ಸಣ್ಣ ಪುಟ್ಟ ಕಳ್ಳತನ ಮಾಡಲು ನಿರ್ಧರಿಸಿದ್ದೆವು. ಅದರಂತೆ ಜು.8ರಂದು ಮಧ್ಯಾಹ್ನ ಮಂಗಳೂರು ರೈಲು ನಿಲ್ದಾಣದಿಂದ ಪಂಪ್‌ವೆಲ್ ಕಡೆಗೆ ಬಂದು ಎಲ್ಲಾ ಅಂಗಡಿಗಳನ್ನು ಗಮನಿಸಿದ್ದೆವು. ಬಿಎಚ್ ಟ್ರೇಡರ್ಸ್ ಅಂಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರವಾಗುವುದನ್ನು ತಿಳಿದು ಕೊಂಡೆವು. ಪುನಃ ರೈಲು ನಿಲ್ದಾಣಕ್ಕೆ ತೆರಳಿ ನಂತರ ರಾತ್ರಿ ವೇಳೆ ಕಳ್ಳತನ ಮಾಡಲು ನಿರ್ಧರಿಸಿದೆವು. ಕಳ್ಳತನ ಮಾಡಿ ದಾಗ ತುಂಬಾ ಹಣ ದೊರೆತ ಕಾರಣ ಇಲ್ಲಿ ಯಾರ ಕೈಗೂ ಸಿಗಬಾರದು ಎಂದು ನಿರ್ಧರಿಸಿ ಪುಣೆಗೆ ಪ್ರಯಾಣ ಬೆಳೆಸಿರು ವುದಾಗಿ ತನಿಖೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುವ ಸಲುವಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಕಂಕನಾಡಿ ನಗರ ಠಾಣೆಯ ಎಸ್ಸೈಗಳಾದ ಶಿವಕುಮಾರ್, ಶಾಂತಪ್ಪ, ಎಎಸ್ಸೈಗಳಾದ ವೆಂಕಟೇಶ್ ಕುಂಬ್ಳೆ, ಅಶೋಕ, ಸಿಬ್ಬಂದಿಗಳಾದ ಜಯಾನಂದ, ಸಂದೀಪ್, ಪ್ರದೀಪ್, ಪ್ರಿತೇಶ್, ರಾಜೇಶ್, ರಾಜೇಸಾಬ್ ಮುಲ್ಲಾ, ಚೇತನ್, ಗಂಗಾಧರ, ರಾಘವೇಂದ್ರ, ಸಂತೋಷ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಎಸಿಪಿ ಧನ್ಯಾ ಎಸ್. ನಾಯಕ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post