ಮಂಗಳೂರು, ಜುಲೈ 12: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡ್ಮೂರು ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 12.50 ಲಕ್ಷ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಂಜೇಶ್ವರ ಮೂಲದ ಶಿಯಾಬ್ ಯಾನೆ ಸಿಯಾ, ಬಜ್ಪೆ ಮೂಲದ ಅರ್ಫ್ರಾಝ್ ಯಾನೆ ಅರ್ಫಾ ಮತ್ತು ಸಫ್ವಾನ್ ಯಾನೆ ಸಪ್ಪಾ ಹಾಗೂ ಸಜಿಪದ ಜಂಶೀರ್ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಕೊಣಾಜೆ ಠಾಣಾ ವ್ಯಾಪ್ತಿಯ ಮೂರು ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳು ಮನೆಗಳ ಬೀಗಗಳನ್ನು ಒಡೆದು ಸುಮಾರು 9,25,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು ಎಂದು ಮಾಹಿತಿ ನೀಡಿದರು.
ಜು.10ರಂದು ಮುಂಜಾವ ಕೊಣಾಜೆ ಠಾಣೆಯ ಎಸ್ಸೈ ವಿನೋದ್ ಹಾಗೂ ಸಿಬ್ಬಂದಿ ವರ್ಗವು ಪಾತೂರು ಕಡೆಯಿಂದ ಮುದುಂಗಾರಕಟ್ಟೆ ಚೆಕ್ ಪಾಯಿಂಟ್ ಬಳಿ ಕಾರಿನಲ್ಲಿ ಬಂದ ಮೂವರನ್ನು ವಿಚಾರಿಸಿದ್ದಾರೆ. ಅಲ್ಲದೆ ಕಾರನ್ನು ತಪಾಸಣೆ ಮಾಡಿದಾಗ ಕಾರಿನಲ್ಲಿ 2 ಡ್ರಾಗನ್, 3 ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್‌ಗಳು, ಹ್ಯಾಂಡ್‌ಗೌಸ್ ಹಾಗೂ ಮನೆಯ ಬಾಗಿಲನ್ನು ಒಡೆಯಲು ಉಪಯೋಗಿಸುವ ಸಲಕರಣೆಗಳು ಪತ್ತೆಯಾಗಿದೆ. ತಕ್ಷಣ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಮೂರು ಮನೆಗಳಲ್ಲಿ ನಡೆಸಿದ ಕಳ್ಳತನ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಒಟ್ಟು 130 ಗ್ರಾಂ ತೂಕದ ಚಿನ್ನಾಭರಣ, 1 ವಾಚ್, ಕಾರು ಸಹಿತ 12,50,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊ ಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.
ಈ ನಾಲ್ವರು ಆರೋಪಿಗಳು ಕೇರಳ ಮೂಲದ ಅಶ್ರಫ್ ಅಲಿ (ಈತ ಕೇರಳದ ಕುಂಬ್ಳೆ ಠಾಣೆಯ ಪೊಲೀಸರಿಂದ ಬಂಧಿತನಾಗಿದ್ದಾನೆ) ಎಂಬಾತನೊಂದಿಗೆ ಸೇರಿಕೊಂಡು ಬಾಡಿಗೆ ಕಾರುಗಳನ್ನು ತೆಗೆದುಕೊಂಡು ಹಗಲು ಹಾಗೂ ರಾತ್ರಿ ಮನೆ ಕಳವು ಮತ್ತು ದರೋಡೆ ನಡೆಸುವ ಚಾಳಿ ಬೆಳೆಸಿಕೊಂಡಿದ್ದರು. ಶಿಯಾಬ್ ನೀಡಿದ ಮಾಹಿತಿಯಂತೆ ಸಜಿಪದ ನಿವಾಸಿ ಜಂಶೀರ್ ಎಂಬಾತನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿ ಶಿಯಾಬ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಕೊಣಾಜೆ ಠಾಣೆಯಲ್ಲಿ 4 ದರೋಡೆ ಮತ್ತು ಮನೆ ಕಳ್ಳತನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟದ 2 ಪ್ರಕರಣ, ಬಜಪೆ ಠಾಣೆಯಲ್ಲಿ 2 ಮನೆ ಕಳ್ಳತನದ ಪ್ರಕರಣ, ಕಡಬ ಠಾಣೆಯಲ್ಲಿ 1 ಹನಿಟ್ರಾಪ್ ಪ್ರಕರಣ, ಕೇರಳ ರಾಜ್ಯದ ಕುಂಬ್ಳೆ ಠಾಣೆಯಲ್ಲಿ 3 ಮನೆ ಕಳ್ಳತನ ಪ್ರಕರಣ, ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣ ಸಹಿತ 13 ಪ್ರಕರಣಗಳು ಈತನ ಮೇಲೆ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣೆಯ ಇನ್‌ಸ್ಪೆಕ್ಟರ್ ರವೀಂದ್ರ, ಎಸ್ಸೈ ವಿನೋದ್, ಎಸ್ಸೈಗಳಾದ ಜಗನ್ನಾಥ ಶೆಟ್ಟಿ ಮತ್ತು ಸಂಜೀವ್, ಸಿಬ್ಬಂದಿಗಳಾದ ರಾಮ ನಾಯ್ಕ್, ರೇಷ್ಮಾ, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಡೇವಿಡ್ ಡಿಸೋಜ, ಸಂತೋಷ್, ಬಸವನಗೌಡ, ಸುರೇಶ್ ತಲವಾರ, ದರ್ಶನ್, ಪ್ರಶಾಂತ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post