ತಿರುವನಂತಪುರಂ: ಕೇರಳದ ನರಬಲಿ ಕೃತ್ಯದಲ್ಲಿ ಪೊಲೀಸರು ಬೆಚ್ಚಿಬೀಳಿಸುವ ವಿಚಾರಗಳನ್ನು ಹೊರಗೆಡವಿದ್ದಾರೆ. ಒಟ್ಟು ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಎನ್ನಲಾಗಿರುವ ಮಹಮ್ಮದ್ ಶಫಿ, ಮಹಿಳೆಯರನ್ನು ಪೋರ್ನ್ ವಿಡಿಯೋದಲ್ಲಿ ನಟಿಸುವುದಕ್ಕಾಗಿ ದಂಪತಿ ಮನೆಗೆ ಕರೆತಂದಿದ್ದ. ಅದಕ್ಕಾಗಿ ದೊಡ್ಡ ಮೊತ್ತದ ಹಣ ನೀಡುವುದಾಗಿ ಆಮಿಷವನ್ನೂ ಒಡ್ಡಿದ್ದ ಎನ್ನುವ ವಿಚಾರ ಪತ್ತೆಯಾಗಿದೆ.. ರಶೀದ್ ಅಲಿಯಾಸ್ ಮೊಹಮ್ಮದ್ ಶಫಿ ಎಂಬಾತನ ಮಾತು ಕೇಳಿ, ಪದ್ಮಾ ಮತ್ತು ರೋಸ್ಲಿನ್ ಎಂಬ ಮಹಿಳೆಯರನ್ನು ಮಾಟ-ಮಂತ್ರಕ್ಕೆ ಬಲಿಕೊಟ್ಟ ಘಟನೆಯೀಗ ದೇಶದ ಜನರ ಮೈನಡುಗಿಸಿದೆ.
ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆಯ ಹತ್ಯೆ ಜೂನ್ನಲ್ಲಿಯೇ ನಡೆದಿದ್ದರೆ, ಮತ್ತೊಬ್ಬಳ ಕೊಲೆ ಇತ್ತೀಚೆಗೆ ನಡೆದಿದೆ. ಆದರೆ ಇಬ್ಬರ ಹತ್ಯೆಯೂ ಒಂದೇ ಮಾದರಿಯಲ್ಲಿ ನಡೆದಿದೆ. ಮಹಿಳೆಯರ ಇಬ್ಬರ ದೇಹವನ್ನು ಕತ್ತರಿಸಿ, ತುಂಡರಿಸಲಾಗಿದೆ. ಪೀಸ್ಪೀಸ್ ಆದ ದೇಹವನ್ನು ದಂಪತಿಯ ಮನೆಯ ಆವರಣದಲ್ಲಿಯೇ ಇರುವ ಹಿತ್ತಲಲ್ಲಿ ಹೂತು ಹಾಕಲಾಗಿತ್ತು. ನಾಪತ್ತೆಯಾದ ಮಹಿಳೆಯರ ಪತ್ತೆ ಮಾಡಲು ಹೊರಟ ಪೊಲೀಸರಿಗೆ ಅವರ ಮೃತದೇಹಗಳು, ತುಂಡಾದ ಸ್ಥಿತಿಯಲ್ಲಿ ಸಿಕ್ಕಿವೆ.
ಹೇಗೆ ನಡೆದಿತ್ತು ಪ್ಲ್ಯಾನ್?
ದಂಪತಿಯ ಮೂಢನಂಬಿಕೆಗೆ ಬಲಿಯಾದ ಮಹಿಳೆಯರು ಎರ್ನಾಕುಲಂ ನಿವಾಸಿ ರೋಸ್ಲಿನ್ (49) ಮತ್ತು ಮೂಲತಃ ತಮಿಳುನಾಡಿನವರಾಗಿದ್ದು, ಎರ್ನಾಕುಲಂನಲ್ಲಿಯೇ ನೆಲೆಸಿದ್ದ ಪದ್ಮಾ (52). ಇವರಲ್ಲಿ ರೋಸ್ಲಿನ್ ಜೂನ್ 6ರಂದು ಹತ್ಯೆಯಾಗಿದ್ದರೆ, ಪದ್ಮಾ ಸೆಪ್ಟೆಂಬರ್ 26ರಂದು ಬಲಿಯಾಗಿದ್ದರು.
ಈ ನರಬಲಿಯ ಮಾಸ್ಟರ್ಮೈಂಡ್ ಮೊಹಮ್ಮದ್ ಶಫಿ ಅಲಿಯಾಸ್ ರಶೀದ್. ರಶೀದ್ಗೆ ತತ್ಕ್ಷಣಕ್ಕೇ ಹಣ ಮಾಡುವ ಆಸೆ. ಹೀಗಾಗಿ ಆತ ಮಂತ್ರವಾದಿಯ ಸೋಗು ಹಾಕಿಕೊಂಡಿದ್ದ. ಶ್ರೀದೇವಿ ಎಂಬ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ರಚಿಸಿಕೊಂಡಿದ್ದ. ಮತ್ತು ಅದರಲ್ಲಿ ಭಗವಾಲ್ ಸಿಂಗ್ನನ್ನು ಗೆಳೆಯನನ್ನಾಗಿ ಮಾಡಿಕೊಂಡಿದ್ದ. ಶ್ರೀದೇವಿ (ರಶೀದ್) ಮತ್ತು ಭಗವಾಲ್ ಸಿಂಗ್ ನಡುವೆ ಸ್ನೇಹ ಗಟ್ಟಿಯಾಗಿತ್ತು. ಮೆಸೆಂಜರ್ನಲ್ಲಿ ಮಾತುಕತೆಯೂ ಜೋರಾಗಿ ನಡೆದಿತ್ತು. ಒಂದು ದಿನ ಶ್ರೀದೇವಿ ಹೆಸರಿನ ರಶೀದ್, ‘ನೀವು ಹಣ ಮಾಡಬೇಕು, ತಕ್ಷಣಕ್ಕೇ ಶ್ರೀಮಂತರಾಗಬೇಕು ಎಂದರೆ ನರಬಲಿ ಕೊಡಬೇಕು. ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆಯನ್ನೂ ನಾನು ಮಾಡುತ್ತೇನೆ. ನನಗೊಬ್ಬ ಮಂತ್ರವಾದಿಯೂ ಗೊತ್ತಿದೆ’ ಎಂದು ಭಗವಾಲ್ ಸಿಂಗ್ನಿಗೆ ಹೇಳಿದ್ದ. ಭಗವಾಲ್ ಸಿಂಗ್ ಈ ಬಗ್ಗೆ ತನ್ನ ಪತ್ನಿಗೆ ಹೇಳಿದಾಗ ಆಕೆಗೂ ಆಸೆ ಚಿಗುರಿತು. ಇಬ್ಬರೂ ಹೀಗೊಂದು ಮಾಟಮಂತ್ರ-ನರಬಲಿಗೆ ಸಿದ್ಧರಾಗೇಬಿಟ್ಟಿದ್ದರು.
ಭಗವಾಲ್ ಸಿಂಗ್ ಒಪ್ಪಿಗೆ ಕೊಟ್ಟ ನಂತರ ಶ್ರೀದೇವಿ (ರಶೀದ್) ಒಬ್ಬ ಮಂತ್ರವಾದಿಯನ್ನು ಪರಿಚಯಿಸಿದ್ದ. ಅಂದರೆ ಮುಖತಃ ಅಲ್ಲ, ಆತನ ವಿಳಾಸ/ ಫೋನ್ನಂಬರ್ ಇತ್ಯಾದಿ ಕೊಟ್ಟಿದ್ದ. ಹೀಗೆ ಪರಿಚಯಿಸಲ್ಪಟ್ಟ ಮಂತ್ರವಾದಿ ಮತ್ಯಾರೂ ಆಗಿರಲಿಲ್ಲ, ಅದೇ ‘ರಶೀದ್’ ಆಗಿದ್ದ..!. ಫೇಸ್ಬುಕ್ನಲ್ಲಿ ಶ್ರೀದೇವಿಯಾಗಿ ಭಗವಾಲ್ ಸಿಂಗ್ನನ್ನು ಬುಟ್ಟಿಗೆ ಹಾಕಿಕೊಂಡು, ಅವನನ್ನು ನಂಬಿಸಿದ ರಶೀದ್ ಕೊನೆಗೆ ಮಾಟಗಾರನಾಗಿ ಭಗವಾಲ್ ಸಿಂಗ್ ದಂಪತಿ ಎದುರು ನಿಂತಿದ್ದ. ಅಲ್ಲಿಂದ ಶುರುವಾಗಿತ್ತು ದಂಪತಿ ಮತ್ತು ರಶೀದ್ನ ಮಾಟಮಂತ್ರದ ಅಭ್ಯಾಸಗಳು. ಲೈಲಾಳನ್ನೂ ಕೂಡ ಆತ ಲೈಂಗಿಕವಾಗಿ ಬಳಸಿಕೊಂಡಿದ್ದ. ಅದೂ ಕೂಡ ಆಕೆಯ ಗಂಡ ಭಗವಾಲ್ ಸಿಂಗ್ ಎದುರಲ್ಲೇ. ಇವೆಲ್ಲ ಮಾಟ-ಮಂತ್ರದ ಭಾಗವೇ ಆಗಿದೆ ಎಂದು ದಂಪತಿಯನ್ನು ರಶೀದ್ ನಂಬಿಸಿದ್ದ. ದಂಪತಿಯಂತೂ ರಶೀದ್ನನ್ನು ಸಂಪೂರ್ಣವಾಗಿ ನಂಬಿಬಿಟ್ಟಿದ್ದರು. ನಾವೇನಾದರೂ ಶ್ರೀಮಂತರಾದರೆ, ನಮ್ಮ ಅದೃಷ್ಟ ಬದಲಾದರೆ ನೀವು ಕೇಳಿದ್ದನ್ನು ಕೊಡುತ್ತೇವೆ ಎಂದು ಮಂತ್ರವಾದಿ ಸೋಗಿನ ರಶೀದ್ಗೆ ಹೇಳಿದ್ದರು. ಅವರ ನಂಬಿಕೆಯನ್ನು ಆತ ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡ. ನರಬಲಿಗೆ ಸೂಚಿಸಿದ.
ರಶೀದ್ ಎರ್ನಾಕುಲಂನಲ್ಲಿ ಒಳ್ಳೆ ಸಂಪರ್ಕ ಇಟ್ಟುಕೊಂಡಿದ್ದ. ಆತನಿಗೆ ಅನೇಕ ಲಾಟರಿ ಮಾರಾಟಗಾರ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರೆಲ್ಲ ಪರಿಚಯ ಇತ್ತು. ತನಗೆ ಸಹಾಯ ಮಾಡಿ, ದಂಪತಿಗೆ ವಂಚಿಸಲು ನೆರವು ಕೊಟ್ಟರೆ ಹಣ ಕೊಡುತ್ತೇನೆ ಎಂದು ಒಂದಷ್ಟು ಮಹಿಳೆಯರಿಗೆ ಹೇಳಿದ್ದ. ಅದರಂತೆ ಜೂನ್ನಲ್ಲಿ ರೋಸ್ಲಿನ್ ಸಿಕ್ಕರು. ಆಕೆಗೆ ಪೋರ್ನ್ ಸಿನಿಮಾದಲ್ಲಿ ನಟಿಸಲು ರಶೀದ್ ಆಫರ್ ಕೊಟ್ಟ. 10 ಲಕ್ಷ ರೂಪಾಯಿ ಆಮಿಷ ಒಡ್ಡಿದ. ಅದೇನೋ ರೋಸ್ಲಿನ್ ನಂಬಿ ಒಪ್ಪಿಕೊಂಡರು. ಇವರ ಮಾಟಕ್ಕೆ ಬಲಿಯಾದರು.
ಇನ್ನೊಬ್ಬ ಮಹಿಳೆ ಪದ್ಮಾಳನ್ನೂ ಅದೇ ರೀತಿ ಪೋರ್ನ್ ವಿಡಿಯೋ ಮಾಡುವುದಾಗಿ ಹೇಳಿ, ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಶಫಿ ಕರೆತಂದಿದ್ದ. ಸೆ.26ರಂದು ಪದ್ಮಾಳನ್ನು ಕಾರಿನಲ್ಲಿ ಶಫಿ ಕರೆದೊಯ್ದಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪೊಲೀಸರು ಅದೇ ಕ್ಲೂ ಇಟ್ಟುಕೊಂಡು ತನಿಖೆ ನಡೆಸಿದ್ದರು. ಮೊದಲಿಗೆ, 15 ಸಾವಿರ ಹಣ ಕೊಡುವುದಾಗಿ ಶಫಿ ಹೇಳಿದ್ದರಿಂದ ಪದ್ಮಾ ದಂಪತಿಯ ಮನೆ ಮುಟ್ಟುತ್ತಲೇ ತನಗೆ ಹಣ ಕೊಡುವಂತೆ ಪೀಡಿಸಿದ್ದಳು. ಮಾತಿಗೆ ಮಾತು ಬೆಳೆಯುತ್ತಿದ್ದಾಗಲೇ ಒಬ್ಬಾತ ಹಗ್ಗ ತೆಗೆದುಕೊಂಡು ಬಂದು ಪದ್ಮಾಳ ಕುತ್ತಿಗೆಯನ್ನು ಬಿಗಿದಿದ್ದಾನೆ. ಮಹಿಳೆ ಅರೆ ಜೀವ ಇರುವಾಗಲೇ ಬೆಡ್ ರೂಮಿಗೆ ಕರೆದೊಯ್ದು ಶಫಿ ಚೂರಿಯಿಂದ ಆಕೆಯ ಗುಪ್ತಾಂಗಕ್ಕೆ ಇರಿದು ವಿಕೃತ ಸಂತಸಪಟ್ಟಿದ್ದ. ಬಳಿಕ ಕುತ್ತಿಗೆ ಸೀಳಿ ಮಹಿಳೆಯನ್ನು ಕೊಲ್ಲಲಾಗಿತ್ತು. ಕೊನೆಗೆ, ಮೂವರೂ ಸೇರಿಕೊಂಡು ಆಕೆಯ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದರು. ಕೊನೆಯದಾಗಿ ಎರಡು ಗುಂಡಿಗಳನ್ನು ತೋಡಿ ದೇಹದ ತುಂಡುಗಳನ್ನು ಸಮಾಧಿ ಮಾಡಿದ್ದರು.
ಅತ್ಯಂತ ಕ್ರೂರವಾಗಿ ಹತ್ಯೆ
ಇಬ್ಬರೂ ಮಹಿಳೆಯರನ್ನು ಅಪಹರಣ ಮಾಡಿದ 24ಗಂಟೆಯಲ್ಲಿ ಈ ಮೂವರೂ ಸೇರಿ ಕೊಂದಿದ್ದಾರೆ. ರೋಸ್ಲಿನ್ ಮತ್ತು ಪದ್ಮಾ ಇಬ್ಬರ ಹತ್ಯೆಯ ಮಾದರಿಯೂ ಒಂದೇರೀತಿ ಇದೆ. ‘ಮಾಟ ನಡೆಯುತ್ತಿದ್ದ ಸ್ಥಳ ಅಂದರೆ ದಂಪತಿಯ ಮನೆಗೆ ಮಹಿಳೆಯರನ್ನು ಕರೆತಂದು, ಮೊದಲು ಮಂಚದ ಮೇಲೆ ಮಲಗಿಸಿ, ಅವರನ್ನು ಕಟ್ಟಲಾಗಿತ್ತು. ಅವರು ಕಿರುಚದಂತೆ ತಡೆಯಲು, ತಲೆಯ ಮೇಲೆ ಸುತ್ತಿಗೆಯಿಂದ ಹೊಡೆಯಲಾಯಿತು. ಅದಾದ ಮೇಲೆ ರಶೀದ್, ಮಹಿಳೆಯರ ಕುತ್ತಿಗೆಗೆ ಗಾಯಮಾಡುವಂತೆ ಲೈಲಾಗೆ ಹೇಳಿದ್ದ. ಆ ಮಹಿಳೆ ಹಾಗೇ ಮಾಡಿದ್ದಳು. ಅಷ್ಟಾದ ಮೇಲೆ ಮಹಿಳೆಯರ ಗುಪ್ತಾಂಗಕ್ಕೆ ಚಾಕು ಹಾಕಿ, ಅಲ್ಲಿಂದ ಬರುವ ರಕ್ತವನ್ನು ಇಡೀ ಮನೆಗೆ ಸಿಂಪಡಿಸುವಂತೆ ರಶೀದ್ ದಂಪತಿಗೆ ಹೇಳಿದ್ದ. ಇದರಿಂದ ಮನೆ ಸಿರಿ-ಸಂಪತ್ತಿನಿಂದ ಸಮೃದ್ಧಿಗೊಳ್ಳುತ್ತದೆ ಎಂದು ನಂಬಿಸಿದ್ದ. ದಂಪತಿ ಹಾಗೇ ಮಾಡಿದ್ದರು. ಅದಕ್ಕಿಂತ ಮುಖ್ಯವಾಗಿ ಇಬ್ಬರೂ ಮಹಿಳೆಯರನ್ನು ಹತ್ಯೆ ಮಾಡುವ ಮುನ್ನ ರಶೀದ್ ಲೈಂಗಿಕವಾಗಿ ಬಳಸಿಕೊಂಡಿದ್ದ.
ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿದೆ, ಇನ್ನೊಬ್ಬಾಕೆಯ ದೇಹ 5 ಭಾಗಗಳಾಗಿವೆ. ದೇಹದ ತುಂಡುಗಳನ್ನು ಇಟ್ಟ ಚೀಲದ ಮೇಲೆಲ್ಲ ಕುಂಕುಮ ಇತ್ತು. ಸದ್ಯ ತುಂಡಾದ ದೇಹಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಪದ್ಮಾ ದೇಹ ಯಾವುದು, ರೋಸ್ಲಿನ್ ದೇಹ ಯಾವುದೆಂದು ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ನಲ್ಲಿ ಒಬ್ಬ ಮಹಿಳೆಯನ್ನು ಬಲಿಕೊಟ್ಟರೂ ಮನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತಾವು ಸಿರಿವಂತರಾಗಿಲ್ಲ ಎಂದು ದಂಪತಿ ರಶೀದ್ ಎದುರು ಹೇಳಿದ್ದರಿಂದಲೇ ಆತ ಎರಡನೇ ಬಲಿಗೆ ಸಲಹೆ ಕೊಟ್ಟಿದ್ದ. ಅದರಂತೆ ಪದ್ಮಾ ಇವರ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದರು. ಕೊಚ್ಚಿ ಸಿಟಿ ಪೊಲೀಸ್ ಕಮಿಷನರ್ ನಾಗರಾಜು ಚಕ್ಕಿಲಮ್ ಬುಧವಾರ ಸುದ್ದಿಗೋಷ್ಟಿ ನಡೆಸಿ, ಹೇಯ ಕೃತ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಹಮ್ಮದ್ ಶಫಿಯೇ ಪ್ರಮುಖ ಆರೋಪಿಯಾಗಿದ್ದು ದಂಪತಿಯನ್ನು ಸಂಪತ್ತು ವೃದ್ಧಿಗಾಗಿ ನರಬಲಿ ಕೊಡುವಂತೆ ಪ್ರೇರೇಪಿಸಿದ್ದ ಎಂದು ತಿಳಿಸಿದ್ದಾರೆ. ಡಿಎನ್ಎ ಟೆಸ್ಟ್ ಇನ್ನಿತರ ವೈಜ್ಞಾನಿಕ ಸಾಕ್ಷ್ಯಗಳ ಪತ್ತೆಗಾಗಿ ಒಟ್ಟು ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post