ಉಳ್ಳಾಲ, ಅ.12: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಿಂದ ಅಚಾನಕ್ಕಾಗಿ ಸಮುದ್ರಕ್ಕೆ ಬಿದ್ದ ವ್ಯಕ್ತಿಯನ್ನ ಸ್ಥಳದಲ್ಲೇ ಇದ್ದ ವಿದೇಶಿ ಪ್ರವಾಸಿಗನೊಬ್ಬ ರಕ್ಷಿಸಿದ ಘಟನೆ ನಡೆದಿದ್ದು, ಘಟನೆಯಲ್ಲಿ ಅಸ್ವಸ್ಥಗೊಂಡ ವ್ಯಕ್ತಿಯನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಚೆಟ್ಟಿಯಾರ್ (41) ರಕ್ಷಿಸಲ್ಪಟ್ಟ ವ್ಯಕ್ತಿ. ಸ್ವೀಡನ್ ದೇಶದ ಪ್ರವಾಸಿಗ ಆಡಮ್ ರಕ್ಷಿಸಿದವರು. ಬುಧವಾರ ಮಧ್ಯಾಹ್ನದ ವೇಳೆ ಪ್ರವೀಣ್ ಅವರು ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಆಯಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲೇ ಮೀನಿಗೆ ಗಾಳ ಹಾಕುತ್ತಿದ್ದ ಸ್ವೀಡನ್ ಪ್ರವಾಸಿಗ ಆಡಮ್ ತಕ್ಷಣ ಸಮುದ್ರಕ್ಕೆ ಧುಮುಕಿ ಪ್ರವೀಣ್ ಅವರನ್ನು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಪ್ರವೀಣ್ ಅವರಿಗೆ ಆಡಮ್ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡಮ್ ಅವರ ಕಾರ್ಯದ ಬಗ್ಗೆ ಸ್ಥಳೀಯರು ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋಮೇಶ್ವರ ಬೀಚಲ್ಲಿ ಆತ್ಮಹತ್ಯೆ, ನೀರಪಾಲಾಗುವ ಅವಘಡ ನಿರಂತರ ಆಗುತ್ತಿರುತ್ತದೆ. ಅನೇಕ ಸಂದರ್ಭಗಳಲ್ಲಿ ಇಲ್ಲಿ ಸಮುದ್ರ ಪಾಲಾಗುತ್ತಿದ್ದವರನ್ನ ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಈ ಪ್ರದೇಶದಲ್ಲಿ ಖಾಯಂ ಜೀವರಕ್ಷಕ ಸಿಬ್ಬಂದಿಗಳನ್ನ ನೇಮಿಸದೆ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post