ಮಂಗಳೂರು: ರಾಜ್ಯ ಸರಕಾರ ಕೆಂಪುಕಲ್ಲು ಗಣಿಗಾರಿಕೆ ಮೇಲೆ ವಿಧಿಸಿದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿಯಾಗಿಯೇ ಉಳಿದಿದೆ. ರಾಜಸ್ವ ಹೆಸರಿನಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕುಳಗಳು ಒಂದು ಕೆಂಪು ಕಲ್ಲಿಗೆ 50-55 ರೂ. ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗ, ಉದ್ಯಮಿಗಳ ಪಾಲಿಗೆ ಬರೆಯಾಗಿದೆ.
ಈ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ ಹೊಸ ತೆರಿಗೆಯಿಂದ ಗಣಿ ಉದ್ಯಮ ಕಂಗಾಲಾಗಿದ್ದು, ಮರಳುಗಾರಿಕೆ, ಕೆಂಪುಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಉದ್ಯಮ ಸ್ತಬ್ದವಾಗಿತ್ತು. ಇದರಿಂದ ಮನೆ ನಿರ್ಮಾಣ, ವಸತಿ ಸಂಕೀರ್ಣ, ಕಟ್ಟಡ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿತ್ತು. ಇದರ ವಿರುದ್ಧ ಉದ್ಯಮಿಗಳು, ಕಾಂಟ್ಯಾಕ್ಟ್‌ದಾರರು, ಜನಪ್ರತಿನಿಧಿಗಳು ಬೀದಿಗಿಳಿದು ರಾಜಧನ ಇಳಿಸುವಂತೆ ಪ್ರತಿಭಟನೆ ನಡೆಸಿದ್ದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಂಕಿ-ಸಂಖ್ಯೆ ಪ್ರಕಾರ ಹಿಂದೆ 10 ಟನ್ (ಅಂದಾಜು 400 ಕೆಂಪುಕಲ್ಲು) ಕೆಂಪುಕಲ್ಲಿಗೆ 50 ರೂ. ರಾಯಲ್ಟಿ ಕಟ್ಟಬೇಕಾಗಿತ್ತು. ಈ ದರ 120 ರೂ.ವರೆಗೂ ಏರಿಕೆಯಾಗಿತ್ತು. ಆದರೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿ ರಾಯಲ್ಟಿ 700 ರೂ., ಡಿಎಂಎಫ್ 70 ರೂ., ಎಪಿ 280 ರೂ., 2ಡಿ-1,050 ರೂ. ಸೇರಿದಂತೆ 10 ಟನ್ ಕೆಂಪುಕಲ್ಲಿಗೆ 2,564 ರೂ. ರಾಜಧನ ಕಟ್ಟಲು ಆದೇಶ ಮಾಡಿತ್ತು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೆಂಪುಕಲ್ಲಿನ ದರ ಏರಿಕೆ ಹಾಗೂ ಮರಳು ಕೊರತೆ ಚರ್ಚೆ ನಡೆಯಿತು. ವಿಷಯ ಪ್ರಸ್ತಾವಿಸಿದ ಶಾಸಕ ಉಮಾನಾಥ ಕೋಟ್ಯಾನ್, ಕೆಂಪುಕಲ್ಲು ತೆಗೆಯುವವರಿಗೆ ಸಮಸ್ಯೆಯಾಗಿದೆ, ಹಾಗಾಗಿ ರಾಯಲ್ಟಿ ಇಳಿಸುವಂತೆ ಆಗ್ರಹಿಲಾಗಿತ್ತು. ಈಗ ಸರಕಾರ ಇಳಿಕೆ ಮಾಡಿದೆ. ಹಿಂದೆ 25 ರೂ. ಆಸುಪಾಸಿನಲ್ಲಿ ಕಲ್ಲು ಸಿಗುತ್ತಿದ್ದರೆ ಈಗ ಕಲ್ಲಿನ ದರ 60 ರೂ.ಗೆ ಏರಿದೆ. ರಾಯಲ್ಟಿ ಇಳಿದರೂ ದರ ಇಳಿದಿಲ್ಲ. ಇದಕ್ಕೆ ಅಗತ್ಯಬಿದ್ದರೆ ಕಲ್ಲುಕೋರೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ನಾನ್ ಸಿಆರ್‌ಝೆಡ್ ವಲಯದಲ್ಲಿ 16 ಬ್ಲಾಕ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ. 4 ಕಡೆ ಲೈವ್ ಬಿಡ್ಡಿಂಗ್ ಆಗಿದೆ. 18 ಕಡೆ ಎಸಿ ಹಂತದಲ್ಲಿದೆ. ಒಟ್ಟು 38 ಹೊಸ ಬ್ಲಾಕ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಬಿಡ್ಡುದಾರರು ಇಲ್ಲದಿದ್ದಲ್ಲಿ ಮರು ಟೆಂಡರ್ ಕರೆಯಲಾಗುವುದು. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅನುಮತಿ ದೊರಕಿಲ್ಲ ಎಂದು ಡಿಸಿ ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post