ಮಂಗಳೂರು, ಫೆ.14: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ವಿವಾದದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ದಿಢೀರ್ ವರ್ಗಾವಣೆ ಮಾಡಲಾಗಿದೆ. ನೂತನ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ವೆಂಕಟೇಶ ಸುಬ್ರಾಯ ಪಟಗಾರ ಎಂಬುವವರನ್ನು ನೇಮಕ ಮಾಡಲಾಗಿದೆ.
ಇತ್ತೀಚೆಗೆ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿತ್ತು. ಕಾಂಗ್ರೆಸ್ ನಿಯೋಗ ನಿನ್ನೆ(ಫೆ,13) ಜೆರೋಸಾ ಸಂಸ್ಥೆಗೆ ಭೇಟಿ ನೀಡಿದ ವೇಳೆ ಡಿಡಿಪಿಐ ವಿರುದ್ದ ಅಸಮಾಧಾನ ಹೊರ ಹಾಕಿತ್ತು. ಈ ವೇಳೆ ಮಾತನಾಡಿದ್ದ ರಮಾನಾಥ್ ರೈ, ‘ಸಮಸ್ಯೆ ಸರಿಪಡಿಸದ ಶಿಕ್ಷಣ ಇಲಾಖೆಯೇ ಜವಾಬ್ದಾರಿಯಾಗುತ್ತೆ ಎಂದಿದ್ದರು. ಜೊತೆಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಹೇಳಿದಂತೆ ಡಿಡಿಪಿಐ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿಯೇ ಡಿಡಿಪಿಐ ಅವರನ್ನು ಇದೀಗ ದಿಢೀರ್ ವರ್ಗಾವಣೆ ಮಾಡಿರುವ ಸಾಧ್ಯತೆಯಿದೆ.
ಮಂಗಳೂರಿನ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ಮಕ್ಕಳಲ್ಲಿ ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ ಎಂದು ಅದರ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು ನಿರ್ಧರಿಸಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣದಲ್ಲಿ ಸೇರುವಂತೆ ಸಂದೇಶ ರವಾನಿಸಿದ್ದರು. ಬಳಿಕ ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಇದೀಗ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೇ ವರ್ಗಾವಣೆ ಮಾಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post