ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಅಜಿತ್ ಪವಾರ್ ಅವರ ಎನ್‌ಸಿಪಿ ಬಣದ ಹಿರಿಯ ನಾಯಕ ಬಾಬಾ ಸಿದ್ದಿಕ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಬಾಂದ್ರಾದಲ್ಲಿ ಬಾಬಾ ಅವರ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ಬಾಬಾ ಸಿದ್ದಿಕ್ ಪ್ರಾಣ ಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಬಾ ಸಿದ್ದಿಕ್ ಅವರು ಅಜಿತ್ ಪವಾರ್ ಅವರ ಎನ್‌ಸಿಪಿ ಬಣದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಈ ಘಟನೆ ಸಂಬಂಧ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಾಬಾ ಸಿದ್ದಿಕ್ ಅವರ ಪುತ್ರ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಈ ಘಟನೆ ನಡೆದಿದೆ. ಸುಮಾರು ಇಂದು ರಾತ್ರಿ 9.15ರ ಹೊತ್ತಿಗೆ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಬಾಬಾ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆ ಭಾಗದಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರು ಎಂದು ಹೇಳಲಾಗಿದೆ. ಗುಂಡಿನ ದಾಳಿ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟೊತ್ತಿಗೆ ಬಾಬಾ ಅವರು ಜೀವಬಿಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರ ಪ್ರಕಾರ ಬಾಬಾ ಸಿದ್ದಿಕ್ ಅವರ ಮೇಲಿನ ಗುಂಡಿನ ದಾಳಿಗೆ ಆರೋಪಿಗಳು 9.9 ಎಂಎಂ ಪಿಸ್ತೂಲ್ ಬಳಸಿದ್ದಾರೆ.
ಇಬ್ಬರು ಬಂಧಿತರ ಪೈಕಿ ಒಬ್ಬ ಉತ್ತರಪ್ರದೇಶದವನು ಹಾಗೂ ಮತ್ತೊಬ್ಬ ಹರಿಯಾಣದವನು ಎನ್ನಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಈ ರಾಜಕಾರಣಿಯ ಮೇಲಿನ ಈ ದಾಳಿಯು ಮಹಾರಾಷ್ಟ್ರ ರಾಜಕಾರಣವನ್ನು ತಲ್ಲಣಗೊಳಿಸಿದೆ. ಈ ದಾಳಿ ಹಿಂದೆ ಭೂಗತ ಜಗತ್ತಿನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಮುಂಬೈ ಹೆಚ್ಚುವರಿ ಪೊಲೀಸ್ ಕಮೀಷನರ್ ಪರಮ್‌ಜಿತ್ ಸಿಂಗ್ ದಹಿಯಾ, ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಗುಂಡಿನ ದಾಳಿಗೆ ಒಳಗಾಗಿದ್ದ ಬಾಬಾ ಸಿದ್ದಿಕ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಇದು ಅತ್ಯಂತ ದುರದೃಷ್ಟಕರ ಘಟನೆ. ನಾನು ವೈದ್ಯರು ಮತ್ತು ಪೊಲೀಸರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಯುಪಿ ಮತ್ತು ಹರಿಯಾಣದವರು ಎಂದು ತಿಳಿದುಬಂದಿದೆ. ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದಿದ್ದಾರೆ.
ನಾವು ಮುಂಬೈ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದೇವೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂಬೈ ಪೊಲೀಸರು ಮೂರನೇ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತಾರೆ ಎನ್ನುವ ಖಾತ್ರಿ ಇದೆ ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post