ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರವಿವಾರ ಸಂಜೆ ಆರಂಭಗೊಂಡು, ಸೋಮವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಭವ್ಯ ಶೋಭಾ ಯಾತ್ರೆಯನ್ನು ಮಳೆಯ ನಡುವೆಯೂ ಸಹಸ್ರಾರು ಜನರು ಕಣ್ತುಂಬಿಕೊಂಡರು. ದಸರಾ ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರಾದ ಪರವಾಗಿ ಜನಾರ್ದನ ಪೂಜಾರಿ ಗೌರವಿಸಿದರು.
ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ಮೆರವಣಿಗೆ ನಡೆಯಿತು.
ಶ್ರೀ ಕ್ಷೇತ್ರ ಕುದ್ರೋಳಿಯಿಂದ ರವಿವಾರ ಸಂಜೆ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗ ವಾಗಿ ಲೇಡಿಹಿಲ್, ನಾರಾಯಣ ಗುರು ವೃತ್ತ, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿ.ವಿ.ಎಸ್. ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಅಳಕೆ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ನಗರದ 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿಬಂತು.
ಅಲಂಕೃತ ಕೊಡೆಗಳು, ಜಾನಪದ ಕಲಾ ತಂಡಗಳು, ಭಜನ ತಂಡ, ವಾದ್ಯ-ಬ್ಯಾಂಡ್ ತಂಡಗಳು ಹಾಗೂ ವಿವಿಧ ಕಲಾ ಪ್ರಕಾರಗಳು ಶೋಭಾಯಾತ್ರೆಗೆ ಹೊಸ ರಂಗು ನೀಡಿದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಹಲವು ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಚೆಲುವು ಹೆಚ್ಚಿಸಿದವು. ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೋಗ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆಯೇ ನೆರೆದಿತ್ತು. ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.
ಶಾಸಕ ಡಿ.ವೇದವ್ಯಾಸ ಕಾಮತ್, ವಿ.ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ಪ್ರಮುಖರಾದ ಮಾಲತಿ ಜೆ.ಪೂಜಾರಿ, ಸಂತೋಷ್ ಕುಮಾರ್ ಜೆ., ರವಿಶಂಕರ ಮಿಜಾರ್, ಎಂ.ಶೇಖರ್ ಪೂಜಾರಿ, ಜಗದೀಪ್ ಡಿ.ಸುವರ್ಣ, ಹರಿಕೃಷ್ಣ ಬಂಟ್ವಾಳ್, ನವೀನ್‌ಚಂದ್ರ ಡಿ.ಸುವರ್ಣ, ಎ.ಸಿ.ಭಂಡಾರಿ, ಎಂ.ಶಶಿಧರ ಹೆಗ್ಡೆ ಸಹಿತ ಹಲವು ಗಣ್ಯರು, ಕ್ಷೇತ್ರಾಡಳಿತದ ಪ್ರಮುಖರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post