ಬೆಳ್ತಂಗಡಿ: ದೇವಸ್ಥಾನಕ್ಕೆ ತೆರಳಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರ ವಿವಿಧ ತಂಡಗಳು ಬುಧವಾರ ತಡ ರಾತ್ರಿಯಿಂದಲೇ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢ ಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂಬಾತ ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನಕ್ಕೆ ಧನುಪೂಜೆಗೆಂದು ಜ.14ರಂದು ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೋಗಿದ್ದ. ಆದರೆ, ದೇವಸ್ಥಾನಕ್ಕೂ ಹೋಗದೆ, ಮನೆಗೂ ಹಿಂದಿರುಗದ ಹಿನ್ನೆಲೆಯಲ್ಲಿ ಮನೆಯವರು, ಸ್ಥಳೀಯರು ಬಾಲಕ ಹೋಗಿದ್ದ ದಾರಿಯಲ್ಲಿ ಹುಡುಕಾಡಿದಾಗ ರಕ್ತದ ಕಲೆಗಳು ಕಂಡುಬಂದಿದ್ದವು. ಇದರಿಂದ ಮೊದಲಿಗೆ ಚಿರತೆ ಕೊಂಡೊಯ್ದಿರಬಹುದು ಎಂಬ ಸಂಶಯ ಮೂಡಿತ್ತು. ಆದರೆ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಸಿಕ್ಕಿತ್ತು.
ಮೃತ ಬಾಲಕನ ತಲೆಯ ಹಿಂಭಾಗ ಗಂಭೀರ ಸ್ವರೂಪದ ಗಾಯವಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನ ದಳ, ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಿನ್ನೆ ಮೃತದೇಹ ಸಿಕ್ಕ ಸುತ್ತಮುತ್ತಲಿನಲ್ಲಿ FSL ತಂಡ, SOCO ತಂಡ, ಪೊಲೀಸರ ತಂಡ ರಾತ್ರಿ 8:30ರಿಂದ 11:30ರ ವರೆಗೆ ರಕ್ತದ ಕಲೆಗಳು ಬಿದ್ದ ಜಾಗಗಳಲ್ಲಿ ಕೆಮಿಕಲ್ ಮೂಲಕ ಗುರುತಿಸುವ ‘ಲೂಮಿನಾಲ್ ಪರೀಕ್ಷೆ’ ನಡೆಸಿದ್ದಾರೆ.
ಬಾಲಕನ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಬಾಲಕನ ಸಾವು ಹಲವು ಸಂಶಯಗಳಿಗೆ ಕಾರಣವಾಗಿದೆ. ಮೃತದೇಹ ಪತ್ತೆಯಾದ ತೋಟದ ಕೆರೆಯ ಪ್ರದೇಶದ ಸುತ್ತಮುತ್ತ ಸಾಕ್ಷ್ಯಾಧಾರಕ್ಕಾಗಿ ಇಂದು ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಒಂದು ತಂಡ ಜ.15ರಂದು ಬೆಳಗ್ಗೆ ಕೆರೆಯ ನೀರನ್ನು ಪಂಪ್ ಬಳಸಿ ಇಂಗಿಸುವ ಕಾರ್ಯ ನಡೆಸಿದೆ. ಈಗಾಗಲೇ ಮೃತದೇಹ ಮನೆಗೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ತಲೆಗೆ ಬಲವಾದ ಗಾಯದ ಗುರುತು ಹಾಗೂ ಶ್ವಾಸಕೋಶದಲ್ಲಿ ನೀರಿದ ಅಂಶವನ್ನು ಶವಪರೀಕ್ಷೆ ವೇಳೆ ಮಂಗಳೂರು ವೈದ್ಯರು ಪತ್ತೆ ಹಚ್ಚಿದ್ದಾರೆ. ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು, ಬೆಳ್ತಂಗಡಿ, ಪುಂಜಾಲಕಟ್ಟೆ, ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೋಸ್ಟ್ ಮಾರ್ಟಂ ವರದಿ: ಬಾಲಕನ ಶವಪರೀಕ್ಷೆಯ ನಂತರ ಬಂದ ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಎಂದು ತಿಳಿಸಿದೆ. ತಲೆಯ ಮೇಲೆ ಮಂದ ಬಲದ ಗಾಯ ಉಂಟಾಗಿವೆ. ಯಾವುದೇ ಚೂಪಾದ ಆಯುಧಗಳಿಂದ ಆಗಿರುವ ಗಾಯವಲ್ಲ ಎಂದು ತಿಳಿದು ಬಂದಿದೆ. ಆದರೆ ತಲೆಯ ಮೇಲಿನ ಗಾಯಗಳ ಬಗ್ಗೆ ಸಮರ್ಪಕವಾದ ವಿವರಣೆ ದೊರಕಿಲ್ಲ. ಆದ್ದರಿಂದ ಸಮಗ್ರ ಹಾಗೂ ಸೂಕ್ಷ್ಮ ತನಿಖೆ ನಡೆಸುವ ಉದ್ದೇಶದಿಂದ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

Discover more from Coastal Times Kannada
Subscribe to get the latest posts sent to your email.








Discussion about this post