ಮಂಗಳೂರು: ಜ 13 ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶನದಲ್ಲಿ ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಆಯೋಜಿಸಲಾದ “ಬಾಲ ಭಜನ ವೈಭವ” ಮಕ್ಕಳ ಭಜನಾ ಸ್ಪರ್ಧಾಕೂಟದ ಅಂತಿಮ ಸುತ್ತು ಭಕ್ತಿ, ಶ್ರದ್ಧೆ ಮತ್ತು ಸಂಗೀತ ಸಂಸ್ಕಾರದ ಅಪೂರ್ವ ಸಂಗಮವಾಗಿ ನಡೆಯಿತು.
ಡಿಸೆಂಬರ್ 19 , 20,21 ರಂದು ನಡೆದ ಪ್ರಥಮ ಸುತ್ತಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಮಕ್ಕಳ ಭಜನಾ ತಂಡಗಳ ಪೈಕಿ ಆಯ್ಕೆಯಾದ ತಂಡಗಳು ಅಂತಿಮ ಸುತ್ತಿನಲ್ಲಿ ತಮ್ಮ ಶ್ರೇಷ್ಠ ಭಕ್ತಿಗಾನವನ್ನು ಪ್ರದರ್ಶಿಸಿವೆ.
ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಲಾಯಿತು. ಕಾಶಿ ಮಠಾಧಿಪತಿ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮಿಜಿಗಳು ಭಜನಾ ತಂಡಗಳಿಗೆ ಫಲಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದರು.
ಅಂತಿಮ ಸುತ್ತಿನ ಸ್ಪರ್ಧೆಗಳಿಗೆ ಖ್ಯಾತ ಸುಗಮ ಸಂಗೀತ ಗಾಯಕ ಹಾಗೂ ಭಕ್ತಿ ಸಂಗೀತ ಕ್ಷೇತ್ರದ ಅನುಭವೀ ಕಲಾವಿದ ಪುತ್ತೂರು ನರಸಿಂಹ ನಾಯಕ್, ಶಾಸ್ತ್ರೀಯ ಸಂಗೀತ ಗಾಯಕಿ ಡಾ ಚೇತನ ಆಚಾರ್ಯ, ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೀಮತಿ ಸಂಗೀತ ಬಾಲಚಂದ್ರ ತೀರ್ಪುಗಾರರಾಗಿದ್ದರು. ಮಕ್ಕಳ ಭಕ್ತಿ, ರಾಗಬದ್ಧತೆ, ಲಯ ಮತ್ತು ತಂಡಶಿಸ್ತು ಆಧಾರದಲ್ಲಿ ತೀರ್ಪು ನೀಡಲಾಯಿತು.

ಕಾರ್ಯಕ್ರಮಕ್ಕೆ IRE-TEX ಪ್ರೈವೇಟ್ ಲಿಮಿಟೆಡ್, ಐಡಿಯಲ್ ಐಸ್ ಕ್ರೀಮ್, ಹ್ಯಾಂಗ್ಯೋ ಐಸ್ ಕ್ರೀಮ್, ತ್ರಾಯಿ ಜುವೆಲ್ಲರ್ಸ್, ರತ್ನ ಸಾಗರ್ ಪಬ್ಲಿಕೇಶನ್, ಶ್ರೀ ರಾಮ್ ಪೇಂಟ್ಸ್ ಅಂಡ್ ಹಾರ್ಡ್ವೇರ್, ಅಮೋಘ ಗಾರ್ಮೆಂಟ್ಸ್, ಎಲ್ ವಿ ಸಿಲ್ಕ್ಸ್ ಅಂಡ್ ಸೂಟ್ಸ್ ಸೇರಿದಂತೆ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳು ಪ್ರಾಯೋಜಕರಾಗಿ ಸಹಕಾರ ನೀಡಿದವು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಡಿ ವಾಸುದೇವ ಕಾಮತ್ , ಉಪಾಧ್ಯಕ್ಷ ಶ್ರೀ ಕೆ ಸುರೇಶ್ ಕಾಮತ್, ಕಾರ್ಯದರ್ಶಿ ರಂಗನಾಥ ಭಟ್, ಕೆನರಾ ಸಾಂಸ್ಕೃತಿಕ ಅಕಾಡೆಮಿಯ ಸಂಚಾಲಕ ನರೇಶ್ ಶೆಣೈ, ಸದಸ್ಯ ಶ್ರೀ ವಿಕ್ರಂ ಪೈ, ಶ್ರೀಯೋಗೀಶ್ ಕಾಮತ್ ,ನಮ್ಮ ಕುಡ್ಲ ಚಾನೆಲ್ ನ ಶ್ರೀ ಲೀಲಾಕ್ಷ ಕರ್ಕೇರ, ಕೆನರಾ ಮ್ಯೂಸಿಯಂ ನ ನಿರ್ದೇಶಕ ಪಯ್ಯನೂರು ರಮೇಶ್ ಪೈ, IRE-TEX ಸಂಸ್ಥೆಯ ಮಾಲೀಕರಾದ ಜಿ ಜಿ ಪೈ, ಶ್ರೀಮತಿ ಲತಿಕಾ ಪೈ, ಕೆನರಾ ಸಂಸ್ಥೆಯ PRO ಶ್ರೀಮತಿ ಉಜ್ವಲ್ ಮಲ್ಯ, ಮುಂತಾದವರು ಉಪಸ್ಥಿತರಿದ್ದರು.
ಬಾಲ ಮನಸ್ಸುಗಳಲ್ಲಿ ಭಕ್ತಿ, ಸಂಸ್ಕಾರ ಮತ್ತು ಭಾರತೀಯ ಸಂಗೀತ ಪರಂಪರೆಯನ್ನು ಬೆಳೆಸುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಬಾಲ ಭಜನ ವೈಭವವು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿತು. ಕೆನರಾ ಬಾಲ ಭಜನ ವೈಭವ ಸ್ಪರ್ಧಾಕೂಟದ ಪ್ರಥಮ ಬಹುಮಾನ ಧ್ಯಾನ್ ಸಂಗೀತ ಅಕಾಡೆಮಿ ಮಂಗಳೂರು, ದ್ವಿತೀಯ ಬಹುಮಾನ ಕೆನರಾ ಹೈಸ್ಕೂಲ್ ಸಿಬಿಎಸ್ ಇ, ಹಾಗೂ ತೃತೀಯ ಬಹುಮಾನವನ್ನು ಭಕ್ತಿ ವಿಕಾಸ ಪಿತ್ರೋಡಿ ಉದ್ಯಾವರ ಇವರ ತಂಡ ಗೆದ್ದುಕೊಂಡಿತು. ಶ್ರೇಷ್ಠ ಹಾರ್ಮೋನಿಯಂ ವಾದಕ ಪ್ರಶಸ್ತಿಯನ್ನು ನಿಖಿಲ್ ಕಾಮತ್, ಶ್ರೇಷ್ಠ ತಬಲವಾದಕ ಪ್ರಶಸ್ತಿಯನ್ನು ಶುಭಂ ಪಡೆದುಕೊಂಡರು.

Discover more from Coastal Times Kannada
Subscribe to get the latest posts sent to your email.







Discussion about this post