ಮಂಗಳೂರು, : ನಗರದಲ್ಲಿ ಸುಗಮ ವಾಹನ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಬಿ.ಸಿ.ರೋಡ್‌ನಿಂದ ಸುರತ್ಕಲ್‌ನ ನಡುವಿನ 35 ಕಿ.ಮೀ. ವ್ಯಾಪ್ತಿಯ ಬಂದರು ಸಂಪರ್ಕ ರಸ್ತೆಯನ್ನು ಚತುಷ್ಪಥದಿಂದ ಷಟ್ಪಥಗೊಳಿಸಲು ಮುಂದಾಗಿದೆ. ಸರ್ವಿಸ್ ರಸ್ತೆಗಳೊಂದಿಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಜತೆಗೆ ಕುಂದಾಪುರ-ಸುರತ್ಕಲ್, ಹಾಗೂ ನಂತೂರು-ತಲಪಾಡಿ ಈ ಹೆದ್ದಾರಿ ಭಾಗಗಳನ್ನು ಸುಧಾರಣೆಗೊಳಿಸುವುದಕ್ಕಾಗಿ ಸಾಧ್ಯತಾ ವರದಿ ಸಿದ್ಧಪಡಿಸುವಂತೆ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಈ ಸಾಧ್ಯತಾ ವರದಿಗೆ ಸದ್ಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಕುಂದಾಪುರ- ತಲಪಾಡಿ 700 ಕೋ.ರೂ ಹಾಗೂ ಸುರತ್ಕಲ್-ಬಿ.ಸಿ.ರೋಡ್ 400 ಕೋ.ರೂ. ಯೋಜನೆ ಸಿದ್ಧಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಈ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಿರಂತರ ವಾಗಿ ಭೇಟಿ ಹಾಗೂ ಮನವಿ ಪತ್ರಗಳ ಮೂಲಕ ಸುರತ್ಕಲ್- ನಂತೂರು- ಬಿ.ಸಿ.ರೋಡ್ ಹೆದ್ದಾರಿ ವ್ಯಾಪ್ತಿಯನ್ನು ಎನ್‌ಎಚ್‌ಎಐಗೆ ಹಸ್ತಾಂತರಿಸಲು ಒತ್ತಾಯಿಸಿ ಇದಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿರುವ ಬೆನ್ನಲ್ಲೇ ಇದೀಗ ಈ ಹೆದ್ದಾರಿ ರಸ್ತೆಗಳ ಷಟ್ಪಥ ಕಾರ್ಯ ಸಾಧ್ಯತೆಯ ಬಗ್ಗೆಯೂ ಪ್ರಕ್ರಿಯೆಗಳು ನಡೆದಿವೆ.
ಹೆದ್ದಾರಿ ಸಚಿವಾಲಯವು ಪ್ರಾಧಿಕಾರಕ್ಕೆ ಸುರತ್ಕಲ್- ಬಿ.ಇಸರೋಡ್ ಹೆದ್ದಾರಿ ಸುಧಾರಣೆ ಹಾಗೂ ರಸ್ತೆ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಸೂಚಿಸಿದ್ದು, ಈ ಸಂಬಂಧ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಏಜೆನ್ಸಿ ಮೂಲಕ ಡಿಪಿಆರ್‌ಗೆ ಮುಂದಾಗಿದೆ.
ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಇರುವ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡು 20 ವರ್ಷಗಳಾಗಿವೆ. ಈಗ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವುದಲ್ಲದೆ, ಸರ್ವಿಸ್ ರಸ್ತೆಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ ಪ್ರಾಧಿಕಾರದ್ದಾಗಿದೆ.
ಮಂಗಳೂರು ನಗರಕ್ಕೆ ಬೈಪಾಸ್: ಬಿಸಿ ರೋಡ್‌ನಿಂದ ಪಡೀಲ್-ನಂತೂರು ವೃತ್ತದ ಮೂಲಕ ಹಾದು ಹೋಗುವ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದರಿಂದ ಮಂಗಳೂರು ನಗರಕ್ಕೂ ಬೈಪಾಸ್ ರಸ್ತೆಯ ಅನುಕೂಲ ದೊರೆಯಲಿದೆ. ಈ ಯೋಜನೆಯಡಿ ಮಂಗಳೂರು ಬೈಪಾಸ್ ಅಭಿವೃದ್ಧಿಯಾಗುವುದರಿಂದ ನಂತೂರು ಭಾಗದ ವಾಹನ ದಟ್ಟನೆ ಹಾಗೂ ಇತರೆ ಕೆಲವೊಂದು ಸಂಚಾರ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.
ಸುರತ್ಕಲ್-ಬಿಸಿರೋಡ್ ಹೆದ್ದಾರಿ ಮೇಲ್ದರ್ಜೆಗೆ: ಸುರತ್ಕಲ್-ಬಿಸಿ ರೋಡ್‌ವರೆಗಿನ ಹೆದ್ದಾರಿ ವ್ಯಾಪ್ತಿಯು ಕ್ಯಾ.ಚೌಟ ಅವರ ಸತತ ಪ್ರಯತ್ನದ ಫಲವಾಗಿ ಈಗಾಗಲೇ ಎನ್‌ಎಚ್‌ಎಲ್‌ಎಂಎಲ್ ವ್ಯಾಪ್ತಿಯಿಂದ ಎನ್‌ಹೆಚ್‌ಎಐಗೆ ಹಸ್ತಾಂತರಗೊಂಡಿದೆ. ಇದೀಗ ಈ ಹೆದ್ದಾರಿಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಜತೆಗೆ ರಸ್ತೆ ಸುರಕ್ಷತಾ ವ್ಯವಸ್ಥೆ ಅಳವಡಿಸುವ ಹಿನ್ನಲೆಯಲ್ಲಿ ಡಿಪಿಆರ್ ಅನುಮೋದನೆಯು ಮಹತ್ವದ ಹೆಜ್ಜೆಯಾಗಿದೆ. ಈ ಹೆದ್ದಾರಿ ಅಗಲೀಕರಣವಾಗದೆ ಸಾಕಷ್ಟು ಸಂಚಾರ ದಟ್ಟನೆಗೂ ಕಾರಣವಾಗಿದೆ. ಜತೆಗೆ, ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾದ ಕಾರಣ ಸರಕು ವಾಹನಗಳ ಸುಗಮ ಸಂಚಾರಕ್ಕೂ ಸವಾಲುಗಳು ಎದುರಾಗುತ್ತಿವೆ. ಹೀಗಿರುವಾಗ, ಸುರತ್ಕಲ್-ಬಿಸಿ ರೋಡ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಈ ಡಿಪಿಆರ್ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.
ಕೂಳೂರು-ನಂತೂರು ಎಲಿವೇಟೆಡ್ ಕಾರಿಡಾರ್: ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಸದ್ಯ ಕ್ಯಾರೇಜ್ ವೇ 23-24 ಮೀಟರ್ ಅಷ್ಟೇ ಇದೆ. ಈ ಭಾಗದ ಹೆದ್ದಾರಿ ಮೇಲೆ ತೀರಾ ಒತ್ತಡವಿರುವುದರಿಂದ 45 ಮೀಟರ್ ಗೆ ಅಗಲಗೊಳಿಸಿ, ಷಟ್ಪಥಗೊಳಿಸುವ ಉದ್ದೇಶ ಹೊಂದಲಾಗಿದೆ. 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ ಫ್ಲೈಓವರ್‌ಗಳನ್ನು ಯಾವ ರೀತಿಯಲ್ಲಿ ಮರುವಿನ್ಯಾಸ ಮಾಡಬಹುದು ಅಥವಾ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆಯೂ ಅಧ್ಯಯನ ನಡೆಯಲಿದೆ. ಮುಖ್ಯವಾಗಿ ಕೂಳೂರಿನಿಂದ ನಂತೂರುವರೆಗೆ ಎಲಿವೇಟೆಡ್ ಹೈವೇ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಕುಳೈ ಮತ್ತು ಕುಂಟಿಕಾನ ಹೈವೇಯಲ್ಲಿ ಎಲಿವೇಟೆಡ್ ಹೈವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಜೆ ಆಸ್ಪತ್ರೆಯ ಬಳಿಕ ಕದ್ರಿ ಹಿಲ್ಸ್ ಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎನ್ನುತ್ತಾರೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು.
ಈ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಹೊಸದಾಗಿ ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ. ಪ್ರಸ್ತುತ ಈ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯಿಲ್ಲದ ಕಾರಣ ಸ್ಥಳೀಯರಿಗೂ ಹಾಗೂ ಇತರೆ ಸಾರ್ವಜನಿಕರಿಗೂ ಸಾಕಷ್ಟು ಅನಾನುಕೂಲವಾಗುತ್ತಿದ್ದು, ರಸ್ತೆ ಸುರಕ್ಷತೆಗೂ ಹತ್ತಾರು ಸವಾಲುಗಳು ಎದುರಾಗಿವೆ. ಈಗ ಡಿಪಿಆರ್ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.

Discover more from Coastal Times Kannada
Subscribe to get the latest posts sent to your email.







Discussion about this post