ನವದೆಹಲಿ: ಶ್ರದ್ಧಾ ವಾಕರ್ ಪ್ರಕರಣ ಇನ್ನೂ ಸುದ್ದಿಯಲ್ಲಿ ಇರುವಾಗಲೇ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, 24 ವರ್ಷದ ವ್ಯಕ್ತಿಯೊಬ್ಬ ಗೆಳತಿಯನ್ನು ಕೊಂದು, ಆಕೆಯ ದೇಹವನ್ನು ತನ್ನ ಢಾಬಾದ ರೆಫ್ರಿಜರೇಟರ್‌ನಲ್ಲಿ ತುಂಬಿ ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಹೊಗಿದ್ದ ಘಟನೆ ನೈಋತ್ಯ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ದೆಹಲಿಯ ನಜಾಫ್ ಗರ್ ನಗರದ ಮಿತ್ರಾಂವ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ. ಸಾಹಿಲ್ ಗೆಹ್ಲೋಟ್ (24) ಎಂಬಾತ ಆರೋಪಿಯಾಗಿದ್ದು, ಫೆ.9ರಂದು ರಾತ್ರಿ ತನ್ನದೇ ಕಾರಿನಲ್ಲಿ ಯುವತಿಯ ಕುತ್ತಿಗೆಯನ್ನು ಕೇಬಲ್ ನಲ್ಲಿ ಬಿಗಿದು ಕೊಲೆ ಮಾಡಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, 2018ರಲ್ಲಿ ಇವರು ಪರಸ್ಪರ ಪರಿಚಯವಾಗಿದ್ದು, ಬಳಿಕ ಜೊತೆಯಾಗಿದ್ದರು. ಹರ್ಯಾಣ ಮೂಲದ ಯುವತಿಯಾಗಿರುವ ನಿಕ್ಕಿ ಯಾದವ್ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದಳು. ಇಬ್ಬರು ಕೂಡ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಸಂದರ್ಭದಲ್ಲಿ ಪರಿಚಯ ಆಗಿದ್ದು, ಬಳಿಕ ನೋಯ್ಡಾದ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು.
ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. 2018 ರಲ್ಲಿ ಸಾಹಿಲ್ ಗ್ರೇಟರ್ ನೋಯ್ಡಾದ ಗಲ್ಗೋಟಿಯಾ ಕಾಲೇಜಿನಲ್ಲಿ ಡಿ ಫಾರ್ಮಾ ಕೋರ್ಸ್ಗೆ ಪ್ರವೇಶ ಪಡೆದಿದ್ದು, ನಿಕ್ಕಿ ಅದೇ ಕಾಲೇಜಿನಲ್ಲಿ ಬಿಎ ಕೋರ್ಸ್ಗೆ ಪ್ರವೇಶ ಪಡೆದಿದ್ದಳು. ಬಳಿಕ ಗ್ರೇಟರ್ ನೋಯ್ಡಾದಲ್ಲಿ ಇಬ್ಬರೂ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಮನೆಗಳಿಗೆ ಮರಳಿದರು ಮತ್ತು ಲಾಕ್‌ಡೌನ್ ಮುಗಿದ ನಂತರ ಮತ್ತೆ ದ್ವಾರಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಈ ಸಂಬಂಧದ ಬಗ್ಗೆ ಸಾಹಿಲ್ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿರಲಿಲ್ಲ. ಅವನ ಮನೆಯವರು ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಅಂತಿಮವಾಗಿ ಡಿಸೆಂಬರ್ 2022 ರಲ್ಲಿ ಬೇರೊಂದು ಹುಡುಗಿಯ ಜೊತೆ ಆರೋಪಿಯ ನಿಶ್ಚಿತಾರ್ಥವಾಯಿತು. 2023ರ ಫೆಬ್ರವರಿ 9 ಮತ್ತು 10ಕ್ಕೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಈ ವಿಷಯ ನಿಕ್ಕಿಗೆ ತಿಳಿದ ಬಳಿಕ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಬೇರೊಬ್ಬ ಮಹಿಳೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಸಂಗತಿಯನ್ನು ಆರೋಪಿಯು ಗೆಳತಿ ನಿಕ್ಕಿ ಯಾದವ್ ಅವರಿಂದ ಮರೆಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಗ್ಗೆ ತಿಳಿದಾಗ ನಿಕ್ಕಿ ಜಗಳ ಮಾಡಿದ್ದಾಳೆ. ಈ ಸಂದರ್ಭ ಸಾಹಿಲ್, ಮೊಬೈಲ್ ಡೇಟಾ ಕೇಬಲ್ ಅನ್ನು ಕುತ್ತಿಗೆಗೆ ಬಿಗಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ನೀನು ಮತ್ತೊಬ್ಬ ಮಹಿಳೆಯನ್ನು ಮದುವೆಯಾದರೆ ಪ್ರಕರಣ ದಾಖಲಿಸುವುದಾಗಿ ನಿಕ್ಕಿ, ಸಾಹಿಲ್‌ಗೆ ಎಚ್ಚರಿಕೆ ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ, ನೈಋತ್ಯ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ ಆರೋಪಿ ಸಾಹಿಲ್ ಗೆಹಲೋತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರೇಮಿಗಳ ದಿನದಂದು ಘಟನೆ ಬೆಳಕಿಗೆ ಬಂದಿದ್ದು, ಕೊಲೆಯಾದ ನಾಲ್ಕು ದಿನಗಳ ನಂತರ 23 ವರ್ಷದ ಮಹಿಳೆ ನಿಕ್ಕಿ ಯಾದವ್ ಶವವನ್ನು ಮಂಗಳವಾರ ಬೆಳಿಗ್ಗೆ ರೆಸ್ಟೋರೆಂಟ್‌ನಲ್ಲಿನ ರೆಫ್ರಿಜರೇಟರ್‌ನಿಂದ ಹೊರತೆಗೆಯಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದರು. ಮಿತ್ರಾಂವ್ ಗ್ರಾಮದಲ್ಲಿ ಹುಡುಕಾಟ ನಡೆಸಿದಾಗ ಸಾಹಿಲ್ ನಾಪತ್ತೆಯಾಗಿದ್ದ. ಅಲ್ಲದೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಪೊಲೀಸರಿಗೆ ಸಾಹಿಲ್ ಕೊಲೆ ನಡೆಸಿದ್ದಾನೆಂದು ಅನುಮಾನದಲ್ಲಿ ಹುಡುಕಾಟ ನಡೆಸಿದ್ದಾರೆ. ದೆಹಲಿ ಗಡಿಭಾಗದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದಾಗ ‘ಫೆಬ್ರುವರಿ 9ರಂದು ಗೆಳೆಯನಿಗೆ ಕರೆ ಮಾಡಿ ದೆಹಲಿಯ ಉತ್ತಮ್ ನಗರಕ್ಕೆ ಬರಲು ನಿಕ್ಕಿ ಹೇಳಿದ್ದಳು. ಕಾರಿನಲ್ಲಿ ನಿಕ್ಕಿಯನ್ನು ಕೂರಿಸಿಕೊಂಡು ಸಾಹಿಲ್ ಹೊರಟಿದ್ದಾನೆ. ಈ ಸಂದರ್ಭ ಬೇರೆ ಮದುವೆ ಆಗದಂತೆ ನಿಕ್ಕಿ ಒತ್ತಡ ಹಾಕಿದ್ದಾಳೆ. ಅಲ್ಲದೆ, ಗೋವಾಗೆ ತೆರಳಲು ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದಳು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕಾರಿನಲ್ಲೇ ಕೊಲೆ ನಡೆದಿದೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post