ನವದೆಹಲಿ: ತಾಯಿ ಹೊಟ್ಟೆಯಲ್ಲಿದ್ದ ಮಗುವಿನ ದ್ರಾಕ್ಷಿ ಗಾತ್ರದ ಹೃದಯದ ಶಸ್ತ್ರಚಿಕಿತ್ಸೆಯನ್ನು ದೆಹಲಿಯ ಏಮ್ಸ್ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಗರ್ಭಿಣಿಯೊಬ್ಬರು ಏಮ್ಸ್‌ಗೆ ದಾಖಲಾಗಿದ್ದರು. ಮಗುವಿನ ಹೃದಯ ಸ್ಥಿತಿ ಚೆನ್ನಾಗಿಲ್ಲವೆಂದೂ, ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬಹುದೆಂದೂ ತಿಳಿಸಿದ್ದರು. ಮಗುವನ್ನು ಉಳಿಸಿಕೊಳ್ಳಲು ಮುಂದಾದ ದಂಪತಿ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.
ಏಮ್ಸ್‌ನ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್‌ನ ತಜ್ಞರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ತಾಯಿ ಹಾಗೂ ಭ್ರೂಣದ ಆರೋಗ್ಯ ಸ್ಥಿರವಾಗಿದೆ. ತಜ್ಞರ ತಂಡವು ತಾಯಿಯ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ವೈದ್ಯರು ಹೇಳಿದ್ದಾರೆ.
‘ಮಗು ತಾಯಿಯ ಉದರದಲ್ಲಿರುವಾಗಲೇ ಉಂಟಾಗುವ ಕೆಲವು ತೀವ್ರತರದ ಹೃದಯ ಕಾಯಿಲೆಗಳನ್ನು ಶಮನ ಮಾಡಬಹುದು. ಹೊಟ್ಟೆಯಲ್ಲೇ ಅವುಗಳಿಗೆ ಚಿಕಿತ್ಸೆ ನೀಡುವುದರಿಂದ ಜನನದ ಬಳಿಕ ಮಗುವಿನ ಮೇಲ್ನೋಟವು ವೃದ್ಧಿಸುವುದಲ್ಲದೆ, ಸಾಮಾನ್ಯ ಮಗುವಿನಂತೆ ಬೆಳವಣಿಗೆ ಉಂಟಾಗುತ್ತದೆ‘ ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ‘ಬಲೂನ್ ಡಿಲೇಷನ್‘ ಎಂದು ಕರೆಯಲಾಗುತ್ತದೆ.
ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಈ ಪ್ರಕ್ರಿಯೆ ಮಾಡಲಾಗಿದ್ದು, ತಾಯಿಯ ಹೊಟ್ಟೆ ಮೂಲಕ ಮಗುವಿನ ಹೃದಯಕ್ಕೆ ಸೂಜಿ ಚುಚ್ಚಲಾಗಿದೆ. ಬಲೂನ್ ಕ್ಯಾತಿಟರ್ ಮೂಲಕ ರಕ್ತ ಪರಿಚಲನೆಗೆ ಅಡ್ಡಿಯಾಗಿದ್ದ ಕವಾಟವನ್ನು ತೆರೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಭ್ರೂಣವು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಹೊಂದಿ, ಪ್ರಸವದ ವೇಳೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ತಜ್ಞರು ಹೇಳಿದ್ದಾರೆ.
ಈ ಪ್ರಕ್ರಿಯೆಯನ್ನು ಅತೀ ನಾಜೂಕಿನಿಂದ ಮಾಡಲಾಗಿದ್ದು, ಅಲ್ಟ್ರಾಸೌಂಡ್ ಮಾರ್ಗದರ್ಶನದ ಮೂಲಕ ಮಾಡಲಾಗಿದೆ. ತ್ವರಿತವಾಗಿ ಪ್ರಕ್ರಿಯೆ ಮುಗಿಯಬೇಕಾಗಿದ್ದರಿಂದ ಭ್ರೂಣಕ್ಕೆ ಹಾನಿಯಾಗುವ ಸಾಧ್ಯತೆ ಕೂಡ ಹೆಚ್ಚಿತ್ತು.
“ಕೆಲ ವಿಧದ ಗಂಭೀರ ಹೃದ್ರೋಗಗಳನ್ನು ಮಗು ತಾಯಿಯ ಗರ್ಭದಲ್ಲಿರುವಾಗಲೇ ಪತ್ತೆ ಮಾಡಲು ಸಾಧ್ಯ. ಕೆಲವೊಮ್ಮೆ ಗರ್ಭದಲ್ಲಿರುವ ಮಗುವಿಗೆ ನೀಡುವ ಚಿಕಿತ್ಸೆಯು, ಹುಟ್ಟಿದ ಬಳಿಕ ಮಗುವಿನ ಆರೋಗ್ಯ ಉತ್ತಮವಾಗಲು ಮತ್ತು ಸಹಜ ಬೆಳವಣಿಗೆಗೆ ನೆರವಾಗುತ್ತದೆ” ಎಂದು ವೈದ್ಯರು ತಂಡ ಸ್ಪಷ್ಪಡಿಸಿದೆ. ಹೃದಯ ಕವಾಟದಲ್ಲಿನ ತಡೆಯನ್ನು ಸರಿಪಡಿಸುವ ಸಲುವಾಗಿ ಬಲೂನ್ ಡೈಲೇಶನ್ ಪ್ರಕ್ರಿಯೆ ನೆರವೇರಿಸಲಾಗಿದೆ” ಎಂದು ವಿವರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post