ನವದೆಹಲಿ: ತೈಲ, ನೈಸರ್ಗಿಕ ಅನಿಲ ಸಾಗಣೆ ಕುರಿತಾಗಿ ಯುದ್ಧ ಪೀಡಿತ ಇರಾನ್ ಮತ್ತು ಭಾರತ ನಡುವಿನ ಮಾತುಕತೆಗಳು ಫಲ ನೀಡಿವೆ. ಗಲ್ಫ್ ದೇಶಗಳಿಂದ ಎಲ್‌ಪಿಜಿ ಸಾಗಿಸುತ್ತಿದ್ದ ಭಾರತದ ಎರಡು ಹಡಗುಗಳು ಬಂದ್ ಆಗಿರುವ ಹಾರ್ಮುಜ್ ಜಲಮಾರ್ಗವನ್ನು ಇಂದು ಬೆಳಗ್ಗೆ ಸುರಕ್ಷಿತವಾಗಿ ದಾಟಿ ಬಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿರುವ ಶಿಪ್ಪಿಂಗ್ ಸಚಿವಾಲಯದ ಹಿರಿಯ ಅಧಿಕಾರಿ ರಾಜೇಶ್ ಕುಮಾರ್ ಸಿನ್ಹಾ ಅವರು,” ಎಲ್‌ಪಿಜಿಯನ್ನು ಹೊತ್ತ ಭಾರತ ಧ್ವಜಧಾರಿ ಶಿವಾಲಿಕ್ ಮತ್ತು ನಂದಾ ದೇವಿ ಹಡಗುಗಳು ಈಗ ಗುಜರಾತ್‌ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳ ಕಡೆಗೆ ಬರುತ್ತಿವೆ” ಎಂದರು.
“ಈ ಎರಡು ಹಡಗುಗಳು 92,700 ಟನ್ ಎಲ್‌ಪಿಜಿಯನ್ನು ಹೊತ್ತು ತರುತ್ತಿವೆ. ಇದೇ 16 ಅಥವಾ 17 ರಂದು ಭಾರತದ ಬಂದರುಗಳಿಗೆ ಬರಲಿವೆ. ಇದರಿಂದ ದೇಶದಲ್ಲಿ ಉಂಟಾದ ಇಂಧನ ಕೊರತೆಗೆ ಪರಿಹಾರ ನೀಡಲಿವೆ” ಎಂದು ಅವರು ಹೇಳಿದರು.
ಇನ್ನೂ 22 ಹಡಗು ಬಾಕಿ: ಇರಾನ್ ಜೊತೆಗಿನ ಮಾತುಕತೆಯಲ್ಲಿ ತಕ್ಷಣದ ಪರಿಹಾರವಾಗಿ ಎರಡು ಹಡಗುಗಳು ಹಾರ್ಮುಜ್ ಜಲಮಾರ್ಗ ದಾಟಿ ಭಾರತಕ್ಕೆ ಬರುತ್ತಿವೆ. ಆದರೆ, ಇನ್ನೂ 22 ಭಾರತೀಯ ನೌಕೆಗಳು ಅಲ್ಲಿಯೇ ಉಳಿದುಕೊಂಡಿವೆ. ಅವುಗಳು ಇಂಧನ ಮತ್ತು ಇತರ ಸರಕುಗಳನ್ನು ಹೊತ್ತು ನಿಂತಿವೆ. ಕ್ರಮೇಣವಾಗಿ ಈ ಹಡಗುಗಳೂ ಭಾರತದ ಕಡೆಗೆ ಪ್ರಯಾಣ ಬೆಳೆಸಲಿವೆ ಎಂದು ಹೇಳಲಾಗಿದೆ.
ಇರಾನ್ ಜೊತೆ ಭಾರತ ಮಾತುಕತೆ: ತನ್ನ ಹಡಗುಗಳು ಹಾರ್ಮುಜ್ ಜಲಮಾರ್ಗವಾಗಿ ಸಂಚರಿಸಲು ಅವಕಾಶ ನೀಡಬೇಕು ಎಂದು ಕೋರಿ ಭಾರತ ಮೂರು ಬಾರಿ ಇರಾನ್ ಜೊತೆ ನಿರಂತರ ಮಾತುಕತೆ ನಡೆಸಿತ್ತು. ಇದಕ್ಕೆ ಸ್ಪಂದಿಸಿದ್ದ ಇರಾನ್ ಆಡಳಿತ ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ತೆರೆದಿದೆ. ಎರಡು ದಿನಗಳ ಹಿಂದಷ್ಟೇ ಒಂದು ಹಡಗು ಭಾರತಕ್ಕೆ ಸುರಕ್ಷಿತವಾಗಿ ಬಂದಿತ್ತು. ಇದೀಗ, ಮತ್ತೆರಡು ಬರುತ್ತಿರುವುದು ಸಂತಸದ ವಿಚಾರ.
Discover more from Coastal Times Kannada
Subscribe to get the latest posts sent to your email.







Discussion about this post