ಕಾಸರಗೋಡು , ಏ.14 : ಮೂಲ್ಕಿ ಮೂಲದ ಆಟೋರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ( 52) ರವರನ್ನು ಕೊಲೆಗೈದು ಮಂಜೇಶ್ವರ ಸಮೀಪ ಬಾವಿಗೆಸೆದ ಪ್ರಕರಣದ ಆರೋಪಿಯನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ
ಸುರತ್ಕಲ್ ನ ಅಭಿಷೇಕ್ ಶೆಟ್ಟಿ (40) ಬಂಧಿತ ಆರೋಪಿ . ಪೂರ್ವ ದ್ವೇಷ ಕೃತ್ಯಕ್ಕೆ ಕಾರಣವಾಗಿದ್ದು , ತಾನು ಓರ್ವನೇ ಕೃತ್ಯ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇನ್ನಷ್ಟು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಿ ಸಿ ಟಿ ವಿ ಕ್ಯಾಮರಾ ಹಾಗೂ ಇನ್ನಿತರ ಮಾಹಿತಿ ಆಧಾರದಲ್ಲಿ ಆರೋಪಿಯ ಸುಳಿವು ಲಭಿಸಿದ್ದು , ಬೈಕಂಪಾಡಿಯಿಂದ ಈತನನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾದಕ ವಸ್ತು ಸೇವನೆಯ ಮತ್ತಿನಲ್ಲಿ ಶರೀಫ್ ರನ್ನು ಕೊಲೆಗೈದಿದ್ದು , ಈತನ ವಿರುದ್ಧ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಮಂಗಳೂರಿನ ಶಾಲೆಯೊಂದರ ಬಸ್ಸಿನ ಚಾಲಕನಾಗಿದ್ದ ಅಭಿಷೇಕ್ ಮತ್ತು ಶರೀಫ್ ನಡುವೆ ವಾಹನ ಸೈಡ್ ನೀಡುವ ವಿಚಾರ ದ್ವೇಷಕ್ಕೆ ಕಾರಣವಾಗಿತ್ತು. ಸುಮಾರು ಆರು ತಿಂಗಳ ಹಿಂದೆ ಷರೀಫ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಸೈಡ್ ನೀಡಿಲ್ಲ ಎಂದು ವಾಗ್ವಾದ ನಡೆದಿತ್ತು .
ಶಾಲೆಯ 13ನೇ ಬಸ್ಸಿನ ಚಾಲಕನಾಗಿದ್ದ ಈತ ಜಗಳಕ್ಕೂ ಬಂದಿದ್ದನು. ಈ ಬಗ್ಗೆ ಶ ರೀಫ್ ಆಟೋ ತಂಗುದಾಣದ ಉಳಿದ ಆಟೋ ಚಾಲಕರಲ್ಲಿ ತಿಳಿಸಿದ್ದರು. ಇದರಿಂದ ನಗರದಲ್ಲಿನ ಆಟೋ ರಿಕ್ಷಾಗಳು ಅಭಿಷೇಕ್ ಶೆಟ್ಟಿಯ ಬಸ್ಸಿಗೆ ಸೈಡ್ ನೀಡುತ್ತಿಲ್ಲ ಎಂದು ತಪ್ಪು ತಿಳಿದುಕೊಂಡ ಈತ ಶರೀಫ್ ನೇ ಇದಕ್ಕೆ ಕಾರಣ ಎಂದು ಈತ ದ್ವೇಷದ ಪ್ರತಿಕಾರಕ್ಕೂ ಮುಂದಾಗಿದ್ದನು ಇದರಿಂದ ಹೇಗಾದರೂ ಮಾಡಿ ಶರೀಫ್ ರನ್ನು ಮುಗಿಸುವ ಸಂಚು ರೂಪಿಸಿದ್ದನು. ಈ ನಡುವೆ ಬಸ್ಸು ಚಾಲಕ ವೃತ್ತಿಯಿಂದ ಅಭಿಷೇಕ್ ನನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಇದಕ್ಕೆ ಕಾರಣ ಶರೀಫ್ ಎಂದು ಅಭಿಷೇಕ್ ಸಂಶಯ ಗೊಂಡಿದ್ದು, ಇದಕ್ಕೆ ಪ್ರ ತಿಕಾರ ತೀರಿಸಲು ಮುಂದಾದನು. ಏಪ್ರಿಲ್ 9ರಂದು ರಾತ್ರಿ ಆಟೋ ರಿಕ್ಷಾ ಬಾಡಿಗೆ ಗೆಂದು ಮಂಜೇಶ್ವರಕ್ಕೆ ಕರೆದು ಬಂದು ನಿರ್ಜನ ಪ್ರದೇಶಕ್ಕೆ ತಲಪುತ್ತಿದಂತೆ ಚಾಕುವಿನಿಂದ ಇರಿದು ಕೊಲೆಗೈದ ಬಳಿಕ ಬಾವಿಗೆಸೆದಿದ್ದು, ಬಳಿಕ ಅಲ್ಲಿದ್ದ ಸ್ವಲ್ಪ ಮುಂದೆ ರಸ್ತೆಗೆ ಬಂದಾಗ ಆ ದಾರಿಯಾಗಿ ಬಂದ ಸ್ಕೂಟರ್ ಗೆ ಹತ್ತಿ ತಲಪಾಡಿಯ ಸಂಬಂಧಿಕರ ಮನೆಯಲ್ಲಿ ವಾಸ್ತ್ಯವ್ಯ ಹೂಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
208 ರಷ್ಟು ಸಿಸಿ ಟಿವಿ ಕ್ಯಾಮರಾ ದ್ರಶ್ಯ ಹಾಗೂ ಆಟೋ ರಿಕ್ಷಾ ನಿಲ್ದಾಣದ ಉಳಿದ ಚಾಲಕರು ಹಾಗೂ ಇತರರಿಂದ ಮಾಹಿತಿ ಕಲೆಹಾಕಲಾಗಿತ್ತು. ತಲಪಾಡಿಯ ಟೋಲ್ ಗೇಟ್ ಹಾಗೂ ಸಮೀಪದ ಕಟ್ಟಡದ ಸಿ ಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಆಟೋ ರಿಕ್ಷಾ ಈ ದಾರಿಯಾಗಿ ಹಾದು ಬರುತ್ತಿರುವುದು ಗಮನಕ್ಕೆ ಬಂದಿತ್ತು. ಮಂಗಳೂರು ಪೊಲೀಸರ ಸಹಾಯದಿಂದ ಹಲವು ಮಾಹಿತಿಗಳನ್ನು ಕಲೆಹಾಕಿದ ಪೊಲೀಸರು ಆರೋಪಿಯನ್ನು ಕೃತ್ಯ ಬೆಳಕಿಗೆ ಬಂದು ಮೂರು ದಿನಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಐದು ಮಂದಿಯ ತಂಡವನ್ನು ಸಿ ಸಿ ಟಿ ವಿ ಕ್ಯಾಮರಾ ದ್ರಶ್ಯ ಪರಿಶೀಲನೆಗೆ ನಿಯೋಜಿಸಲಾಗಿತ್ತು. ಕೇರಳ – ಕರ್ನಾಟಕದ ಆಟೋ ರಿಕ್ಷಾ ನಿಲ್ದಾಣ ಕೇಂದ್ರೀಕರಿಸಿ ತನಿಖೆ ನಡೆಸಲಾಗಿತ್ತು. ಒಂದು ನಿಲ್ದಾಣದಿಂದ ಲಭಿಸಿದ ಸುಳಿವು ಆರೋಪಿಯ ಪತ್ತೆಗೆ ನೆರವಾಯಿತು. ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಹಚ್ಚಲು ಸಾಧ್ಯವಾಗಿಲ್ಲ . ಇನ್ನಷ್ಟು ತನಿಖೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post