ಮಂಗಳೂರು, ಜೂ15: ಗೃಹ ಸಚಿವರ ಸೂಚನೆಯಂತೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಏಂಟಿ ಕಮ್ಯುನಲ್ ವಿಂಗ್ ಎಂಬ ಹೊಸ ಪೊಲೀಸ್ ತಂಡವನ್ನು ರಚಿಸಿದ್ದಾರೆ. ಸಿಟಿ ಸ್ಪೆಷಲ್ ಬ್ರಾಂಚ್ ಹೆಸರಲ್ಲೇ ಈ ತಂಡ ಅಸ್ತಿತ್ವಕ್ಕೆ ಬಂದಿದ್ದು, ಇದರ ಇನ್ಸ್ ಪೆಕ್ಟರ್ ಆಗಿ ಕೆ.ಎಂ.ಶರೀಫ್ ಅವರನ್ನು ನೇಮಕ ಮಾಡಲಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜೂನ್ 6 ರಂದು ಮಂಗಳೂರಿಗೆ ಭೇಟಿ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ರಚಿಸುವ ಬಗ್ಗೆ ಪ್ರಸ್ತಾಪಿಸಿದ್ದರು.

ಈ ಕುರಿತಂತೆ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಅವರು ಸಿಸಿಬಿ ಘಟಕದ ಎಸಿಪಿ ಅವರ ನೇತೃತ್ವದಲ್ಲಿ ಈ ಆ್ಯಂಟಿ ಕಮ್ಯೂನಲ್ ವಿಂಗ್ ರಚನೆಯಾಗಿ ತನ್ನ ಕೆಲಸವನ್ನು ಅರಂಭಿಸಿದೆ. ನಗರ ವಿಶೇಷ ಘಟಕ- ಸಿ.ಎಸ್.ಬಿ. ಇದರ ಇನ್ಸ್‌ಪೆಕ್ಟರ್ ಮತ್ತು ಸಿಬಂದಿ ಸೇರಿದಂತೆ 6 ಮಂದಿ ಸದಸ್ಯರು ಈ ಟೀಂನಲ್ಲಿದ್ದಾರೆ.
ಸಿಟಿ ಸ್ಪೆಷಲ್ ಬ್ರಾಂಚ್ ಇನ್ಸ್‌ಪೆಕ್ಟರ್ ಷರೀಫ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಸಹಾಯಕ ಪೊಲೀಸ್ ಕಮಿಷನರ್ ಪಿ.ಎ. ಹೆಗಡೆ ತಂಡದ ಮೇಲ್ವಿಚರಣೆ ನಡೆಸಲಿದ್ದಾರೆ. ಎಸಿಪಿ ನೇರವಾಗಿ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ’. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ಸಮಸ್ಯೆಯನ್ನು ನಿಭಾಯಿಸುವುದು ಆ್ಯಂಟಿ ಕಮ್ಯೂನಲ್ ವಿಂಗ್ ನ ಮುಖ್ಯ ಉದ್ದೇಶ.
ಈ ದಿಶೆಯಲ್ಲಿ ಈ ಹಿಂದಿನ ಸುಮಾರು 10 ವರ್ಷಗಳ ಅವಧಿಯಲ್ಲಿ ಕೋಮು ವಿಚಾರಕ್ಕೆ ಸಂಬಂಧಿಸಿ ನಡೆದ ಎಲ್ಲಾ ಕೊಲೆ, ಕೊಲೆ ಯತ್ನ, ದೊಂಬಿ, ನೈತಿಕ ಪೊಲೀಸ್‌ಗಿರಿ, ಗೋವುಗಳ ಕಳ್ಳತನ, ಆಕ್ರಮ ಗೋ ಸಾಗಾಟ, ಗೋ ವಧೆ, ಮುಂತಾದ ಪ್ರಕರಣಗಳನ್ನು ಪರಿಶೀಲಿಸಿ ಅವುಗಳ ಆರೋಪಿಗಳ ಚಲನವಲನಗಳ ಮೇಲೆ ಪ್ರತಿ ನಿತ್ಯ ನಿಗಾ ವಹಿಸಿ ಅವರ ವಿರುದ್ಧ ಭದ್ರತಾ ಕಾಯ್ದೆಯಡಿ ಮುಚ್ಚಳಿಕೆ ಪಡೆದು ಕೊಳ್ಳುವುದು, ಕೋಮು ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಿಗಾ ಇತ್ಯಾದಿ ಕೆಲಸಗಳನ್ನು ಈ ವಿಂಗ್ ನಿರ್ವಹಿಸಲಿದೆ ಎಂದು ಕಮಿಷನರ್ ವಿವರಣೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post