ಬೈಂದೂರು: ವೈಯಕ್ತಿಕ ಲಾಭದ ಕಾರಣಕ್ಕೆ ಹೊರ ಜಗತ್ತಿಗೆ ತಾನು ಸತ್ತು ಹೋಗಿದ್ದೇನೆ ಎಂದು ನಂಬಿಸಲು ಅಮಾಯಕ ವ್ಯಕ್ತಿಯೊಬ್ಬರನ್ನು ಒತ್ತಿನೆಣೆ ಸಮೀಪದ ಹೇನಬೇರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಸದಾನಂದ ಶೇರೆಗಾರ್ (52) ಬಂಧಿತ ಆರೋಪಿ. ಕಾರ್ಕಳ ಮೂಲದ ಮೇಸ್ತ್ರಿ ಆನಂದ ದೇವಾಡಿಗ (55) ಕೊಲೆಯಾದ ನತದೃಷ್ಟ ವ್ಯಕ್ತಿ. ಕೊಲೆಗೆ ಸಹಕಾರ ನೀಡಿದ ಆರೋಪದ ಮೇಲೆ ಹಿರ್ಗಾನ ಶಿವನಗರದ ಶಿಲ್ಪಾ (30), ನಿತೀಶ್ ದೇವಾಡಿಗ (40), ಸತೀಶ್ ದೇವಾಡಿಗ (49) ಎಂಬುವರನ್ನೂ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ನಾಲ್ಕು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.
ಪ್ರಕರಣದ ವಿವರ: ಆರೋಪಿ ಸದಾನಂದ ಶೇರೆಗಾರ್ ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದು ವೈಯಕ್ತಿಕ ಲಾಭದ ಉದ್ದೇಶದಿಂದ ಹೊರ ಜಗತ್ತಿಗೆ ತಾನು ಸತ್ತು ಹೋಗಿರುವುದಾಗಿ ನಂಬಿಸಲು ಸಂಚನ್ನು ರೂಪಿಸಿದ್ದ. ಅದರಂತೆ ಬೇರೊಬ್ಬ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚುವ ಸಂಚು ಹೆಣೆದಿದ್ದ. ಅದರಂತೆ ಪರಿಚಯಸ್ಥನಾಗಿದ್ದ ಕಾರ್ಕಳದ ಮೇಸ್ತ್ರಿ ಆನಂದ ದೇವಾಡಿಗ ಎಂಬುವರನ್ನು ಕರೆಸಿಕೊಂಡು ಕಂಠಪೂರ್ತಿ ಕುಡಿಸಿ, ನಿದ್ರೆ ಮಾತ್ರೆ ನುಂಗಿಸಿ ಬೈಂದೂರಿನ ಒತ್ತಿನೆಣೆಯ ಹೇನಬೇರು ಗ್ರಾಮದ ನಿರ್ಜನ ಪ್ರದೇಶಕ್ಕೆ ಕಾರು ತಂದು ಬೆಂಕಿ ಹಚ್ಚಲಾಗಿತ್ತು. ಕಾರಿನ ಹಿಂಬದಿಯಲ್ಲಿದ್ದ ಆನಂದ ದೇವಾಡಿಗ ದೇಹ ಸುಟ್ಟುಹೋಗಿ ಅಸ್ತಿಪಂಜರ ಪತ್ತೆಯಾಗಿತ್ತು. ಈ ಕೃತ್ಯಕ್ಕೆ ಶಿಲ್ಪಾ ಎಂಬುವರ ನೆರವನ್ನೂ ಪಡೆದಿದ್ದ ಎಂದು ಪೊಲೀಸರು ಪ್ರಕರಣದ ವಿವರ ನೀಡಿದರು.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ: ಕೃತ್ಯದ ಬಳಿಕ ಆರೋಪಿಗಳಾದ ಸದಾನಂದ ಹಾಗೂ ಶಿಲ್ಪಾ ತಲೆ ಮರೆಸಿಕೊಳ್ಳಲು ಬೆಂಗಳೂರಿಗೆ ಹೊರಟ್ಟಿದ್ದರು. ಬಸ್ ಮಾರ್ಗ ಮಧ್ಯೆ ಕೆಟ್ಟಿದ್ದರಿಂದ ಮೂಡುಬಿದ್ರಿಗೆ ವಾಪಾಸಾಗಿದ್ದರು. ಗುರುವಾರ ಮೂಡಬಿದ್ರೆಯಿಂದ ಕಾರ್ಕಳಕ್ಕೆ ಬರುವಾಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಒಂದೇ ದಿನದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಎಸ್‌ಪಿ ವಿಷ್ಣುವರ್ದನ್ ಮಾರ್ಗದರ್ಶನದಲ್ಲಿ, ಎಎಸ್‌ಪಿ ಸಿದ್ಧಲಿಂಗಯ್ಯ ಹಾಗೂ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ಬೈಂದೂರು ಇನ್‌ಸ್ಪೆಕ್ಟರ್ ಸಂತೋಷ್ ಆನಂದ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಠಾಣಾಧಿಕಾರಿ ಪವನ್ ನಾಯಕ್, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಸಿಬ್ಬಂದಿ ಶ್ರೀನಿವಾಸ್, ಸುಜೀತ್, ಶಾಂತರಾಮ ಶೆಟ್ಟಿ, ನಾಗೇಂದ್ರ, ಮೋಹನ್, ಕೃಷ್ಣ, ಶ್ರೀಧರ್, ಚಂದ್ರ ಗಂಗೊಳ್ಳಿ, ಪ್ರಿನ್ಸ್ ಶಿರೂರು, ಚಾಲಕ ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post