ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಸತತ 12ನೇ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ, ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಸಾಹಸ ತೋರಿಸಿದ ದೇಶದ ಧೈರ್ಯಶಾಲಿ ಸೈನಿಕರಿಗೆ ಅವರು ನಮಸ್ಕರಿಸಿದರು. ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸಲು ನನಗೆ ಅವಕಾಶ ಸಿಕ್ಕಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಇದೇ ವೇಳೆ, ಭಾರತವು ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಭಾರತದಲ್ಲಿ ಶೀಘ್ರ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳು ಸಿದ್ಧ: ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯ ಕೇಂದ್ರವಾಗಲಿದೆ, ಶೀಘ್ರವೇ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳು ಸಿದ್ಧಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಈ ವಲಯಕ್ಕೆ ಸಂಬಂಧಿಸಿದ ಹಿಂದಿನ ಕಡತಗಳು 30-40 ವರ್ಷಗಳ ಕಾಲ ಸ್ಥಗಿತಗೊಂಡಿದ್ದವು, ಆದರೆ ಈಗ ಕೆಲಸವು ಮಿಷನ್ ಮೋಡ್‌ನಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು. ಈ ವರ್ಷದ ಅಂತ್ಯದ ವೇಳೆಗೆ, ಭಾರತೀಯ ಎಂಜಿನಿಯರ್‌ಗಳು ತಯಾರಿಸಿದ ಮೇಡ್ ಇನ್ ಇಂಡಿಯಾ ಚಿಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅಂದರೆ, 2025 ರ ಅಂತ್ಯದ ವೇಳೆಗೆ, ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳನ್ನು ತಯಾರಿಸಲಾಗುವುದು. ಇದು ಐಟಿ ಮತ್ತು ಡೇಟಾದ ಶಕ್ತಿಯ ಸಮಯ ಎಂದು ಪ್ರಧಾನಿ ಮೋದಿ ಹೇಳಿದರು. ಸ್ವದೇಶಿ ಕಾರ್ಯಾಚರಣಾ ವ್ಯವಸ್ಥೆಗಳು, ಬಲವಾದ ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಈಗ ನಮ್ಮ ಆದ್ಯತೆಯಾಗಿರಬೇಕು. ನಾವು ಮಾಡುವ ಪ್ರತಿಯೊಂದರಲ್ಲೂ ಭಾರತೀಯ ಸಾಮರ್ಥ್ಯ ಮತ್ತು ವಿಶ್ವಾಸವು ಪ್ರತಿಫಲಿಸಬೇಕು ಎಂದು ಅವರು ಒತ್ತಿ ಹೇಳಿದರು.
ಮೂರು ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ: ನಮ್ಮ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಭೀಕರ ಹೊಡೆತ ನೀಡಿದರು. ಪಹಲ್ಗಾಮ್‌ನಲ್ಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿದ ಭಯೋತ್ಪಾದಕರಿಗೆ ನಾವು ಬಲವಾದ ಪಾಠ ಕಲಿಸಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಉತ್ತರವಾಗಿದೆ. ಆಪರೇಷನ್ ಸಿಂಧೂರ್‌ನಲ್ಲಿ ನಾವು ಮೂರು ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಗುರಿ ಮತ್ತು ಸಮಯದ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾವು ಮೂರೂ ಪಡೆಗಳಿಗೆ ಕೊಟ್ಟಿದ್ದೇವೆ” ಎಂದು ಮೋದಿ ಹೇಳಿದರು.
ಪರಮಾಣು ಬೆದರಿಕೆ ಸಹಿಸುವುದಿಲ್ಲ : ಭಯೋತ್ಪಾದನೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ನಾವು ಪ್ರತ್ಯೇಕವಾಗಿ ನೋಡುವುದಿಲ್ಲ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ. ಅಲ್ಲದೆ, ಭಾರತವು ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ಅಣ್ವಸ್ತ್ರ ಬೆದರಿಕೆವೊಡ್ಡುತ್ತಿರು ಪಾಕಿಸ್ತಾನಕ್ಕೆ ಪ್ರಧಾನಿ ಎಚ್ಚರಿಕೆ ನೀಡಿದರು. ಶತ್ರುವನ್ನು ಯಾವಾಗ ಮತ್ತು ಹೇಗೆ ನಾಶ ಮಾಡಬೇಕೆಂದನ್ನು ನಮ್ಮ ಸೈನ್ಯವು ನಿರ್ಧರಿಸುತ್ತದೆ. ನಮ್ಮ ಗುರಿ ತಲುಪಲು ಸೇನೆಯೇ ಎಲ್ಲ ನಿರ್ಧಾರ ಮಾಡುತ್ತದೆ ಎಂದು ಮೋದಿ ತಿಳಿಸಿದರು.
ಏಪ್ರಿಲ್ 22ರಂದು, ಪಹಲ್ಗಾಮ್‌ನಲ್ಲಿ ಗಡಿ ದಾಟಿದ ಭಯೋತ್ಪಾದಕರು ನರಮೇಧವನ್ನು ಎಸಗಿದರು. ಜನರ ಧರ್ಮದ ಬಗ್ಗೆ ಕೇಳುವ ಮೂಲಕ ಅನೇರನ್ನು ಕೊಂದರು. ಗಂಡಂದಿರನ್ನು ಅವರ ಹೆಂಡತಿಯರ ಮುಂದೆಯೇ ಬಂದೂಕಿನಿಂದ ಗುಂಡು ಹಾರಿಸಿದರು. ಮಕ್ಕಳ ಎದುರಲ್ಲೇ ಅವರ ತಂದೆಯರನ್ನು ಕೊಂದರು. ಈ ಭಯೋತ್ಪಾದಕ ದಾಳಿಯಿಂದ ಇಡೀ ದೇಶವು ಆಕ್ರೋಶಗೊಂಡಿತು. ಆ ಆಕ್ರೋಶದಿಂದ ಆಪರೇಷನ್ ಸಿಂಧೂರ್ ಹೊರಹೊಮ್ಮಿತು. ಏಪ್ರಿಲ್ 22ರ ನಂತರ, ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ನಮ್ಮ ಸೇನೆಯು ದಶಕಗಳಲ್ಲಿ ಮಾಡದ ಕೆಲಸವನ್ನು ಮಾಡಿದೆ. ಅದು ಶತ್ರುಗಳ ಪ್ರದೇಶಕ್ಕೆ ನೂರಾರು ಕಿಲೋಮೀಟರ್ ಮುನ್ನಡೆದು ಭಯೋತ್ಪಾದಕ ಶಿಬಿರಗಳನ್ನು ನೆಲಕ್ಕೆ ಧ್ವಂಸ ಮಾಡಿತು. ಈ ದಾಳಿಯಿಂದ ಪಾಕಿಸ್ತಾನ ಇನ್ನೂ ನಿದ್ರಿಸುತ್ತಿಲ್ಲ. ಪಾಕಿಸ್ತಾನದಲ್ಲಿ ಆಗಿರುವ ದೊಡ್ಡ ಹಾನಿಯ ಬಗ್ಗೆ ಪ್ರತಿದಿನ ಹೊಸ ಮಾಹಿತಿಗಳು ಹೊರಬರುತ್ತಿವೆ ಎಂದು ಮೋದಿ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post