ಕಾಸರಗೋಡು, ನ.14 : ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಹೆಸರಲ್ಲಿ ಭಾರೀ ಚೈನ್ ಲಿಂಕ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಬೇಡಡ್ಕ ಬಳಿಯ ಕುಂಡಂಕುಳಿ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿ ಹಣ ಡಬಲ್ ಮಾಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟಿಗಟ್ಟಲೆ ಮೋಸ ಮಾಡಿದೆ. ಒಂದು ವರ್ಷದಲ್ಲಿ ದ್ವಿಗುಣಗೊಳಿಸುವ ಆಮಿಷದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ಪಡೆದಿದ್ದು ಈಗ ಕಚೇರಿಗೆ ಬಾಗಿಲು ಎಳೆದಿದೆ. ವರ್ಷಕ್ಕೆ ಠೇವಣಿ ಮೇಲೆ 80 ಪ್ರತಿಶತದಷ್ಟು ಲಾಭ ನೀಡುತ್ತೇವೆ. ಒಂದು ವರ್ಷದಲ್ಲಿ ಹಣವನ್ನು ದ್ವಿಗುಣಗಳಿಸುವ ಭರವಸೆ ನೀಡಿ ನೂರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎನ್ನಲಾಗುತ್ತಿದೆ. ಅಂದರೆ, ಹೊಸ ಠೇವಣಿದಾರರಿಂದ ಹಣವನ್ನು ತೆಗೆದುಕೊಳ್ಳುತ್ತದೆ ಮತ್ತು ಹಿಂದಿನ ಹೂಡಿಕೆದಾರರಿಗೆ ಪಾವತಿಸುತ್ತದೆ” ಎಂದು ತನಿಖಾಧಿಕಾರಿ ಶಿಬು ಎಂ ಫಿಲಿಪ್ ಹೇಳಿದರು.
ಈ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ನಡೆಸುತ್ತಿದ್ದು ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿಯ ಎಂಟು ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಕಾಸರಗೋಡಿನ ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಜಿಕ್ಕೋಡ್, ಕಣ್ಣೂರು, ಕಾಸರಗೋಡು ಮತ್ತು ಕರ್ನಾಟಕದ ನೆರೆಯ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಜನರು ಕಂಪನಿಯ “ಮನಿ ಡಬ್ಲಿಂಗ್ ಯೋಜನೆ”ಯಲ್ಲಿ ಹಣ ಹೂಡಿಕೆ ಮಾಡಲು ಕಾರುಗಳಲ್ಲಿ ಬರುತ್ತಿದ್ದರು ಎಂದು ನೆಲಮಹಡಿಯಲ್ಲಿ ಲಾಟರಿ ಮಾರಾಟ ಅಂಗಡಿಯವರು ಹೇಳುತ್ತಿದ್ದರು.
ವಿನೋದ್ ಕುಮಾರ್ ಎಂಬಾತ ಕಂಪನಿಯ ರೂವಾರಿಯಾಗಿದ್ದು ತಾನು ಹೈಲೆವೆಲ್ ಸಂಪರ್ಕದ ವ್ಯಕ್ತಿಯೆಂದು ಪೋಸು ನೀಡುತ್ತಿದ್ದ. ಬಿಗ್ ಪ್ಲಸ್ ಅನ್ನು ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ (GBG) ಎಂಬ ಹೆಸರಲ್ಲಿ ಪ್ರಚಾರ ಮಾಡುತ್ತಿದ್ದ. ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳ ಜೊತೆಗಿದ್ದ ಫೋಟೋವನ್ನು ಹಂಚಿಕೊಳ್ಳುತ್ತಿದ್ದ. ಕೇರಳದ ರಾಜ್ಯಪಾಲರ ಜೊತೆಗಿರುವ ಫೋಟೋವನ್ನು ಈತ ತನ್ನ ವೆಬ್ ಸೈಟಿನಲ್ಲಿ ಹಾಕ್ಕೊಂಡಿದ್ದ. ಆಮೂಲಕ ಸಾಮಾನ್ಯ ಜನರನ್ನು ನಂಬಿಸುತ್ತಿದ್ದ. ಸ್ವತ: ವಿನೋದ್ ಕುಮಾರ್ ಅವರ (drvinodgbg.Com ), ವೆಬ್‌ಸೈಟ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಅವರು ” ರೂ 2,000 ಸಾವಿರ ಕೋಟಿಗಳ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಕಾಸರಗೋಡು ಕಚೇರಿಯಲ್ಲಿ 51 ಕೋಟಿ ಸಂಗ್ರಹ : ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಕಚೇರಿಯಲ್ಲಿ 51 ಕೋಟಿ ರೂಪಾಯಿ ಸಂಗ್ರಹಿಸಿ ಬಡ ಠೇವಣಿದಾರರಿಗೆ ಮೋಸ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ 2015 ರಲ್ಲಿ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಕಣ್ಣೂರು ಗ್ರಾಮೀಣ ಸೂಪರ್ ಮಾರ್ಕೆಟ್ ಲಿಮಿಟೆಡ್ ಆರಂಭಿಸಲು ಜನರಿಂದ ಹಣ ಸಂಗ್ರಹಿಸಿತ್ತು. ಯೋಜನೆ ಕೈಕೊಟ್ಟು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ್ದು ಆನಂತರ ಆ ಕಂಪೆನಿ ನಿಷೇಧಕ್ಕೆ ಒಳಗಾಗಿತ್ತು. ಎಂದು ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ತದನಂತರ ಅಕ್ಟೋಬರ್ 31, 2020 ಬಂದು ಹೊಸ ಕಂಪನಿ ಪ್ರಾರಂಭಿಸಿದ್ದು ಎರಡೇ ವರ್ಷದಲ್ಲಿ ಬಿಗ್ ಪ್ಲಸ್ ಹೆಸರಲ್ಲಿ ನೂರಾರು ಕೋಟಿ ಸಂಗ್ರಹಿಸಿ ನಾಮ ಹಾಕಿದ್ದಾನೆ. ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್ ಹೆಸರಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದು ನೀವು ನಮ್ಮೊಂದಿಗೆ ಕೈಜೋಡಿಸಿದರೆ, ಕಡಿಮೆ ಅವಧಿಯಲ್ಲಿ ಬಹಳಷ್ಟು ಸಾಧನೆ ಮಾಡಬಹುದು ಎಂದು ಹೇಳಿಕೊಂಡಿದ್ದ. ಜಾಲತಾಣದ ಮೂಲಕ ಗ್ರಾಹಕರನ್ನ ಸಂಪಾದಿಸಿ ಹೂಡಿಕೆ ಮಾಡಿಸಿದ್ದು ಈಗ ಮೋಸ ಮಾಡಿದ್ದಾನೆ.
ಕಂಪನಿಗಳ ರಿಜಿಸ್ಟಾರ್ (ROC) ವಿನೋದ್ ಕುಮಾರ್ ಅವರ ಹೆಸರಿನಲ್ಲಿ ಯಾವುದೇ ಕಂಪನಿಯನ್ನು ಐದು ವರ್ಷಗಳವರೆಗೆ ನೋಂದಾಯಿಸುವುದನ್ನು ನಿಷೇಧಿಸಿದೆ ಎಂದು ಎಸ್‌ಐ ಶಿಬು ಫಿಲಿಪ್ ಹೇಳಿದ್ದಾರೆ. ನಿಷೇಧದ ಅವಧಿಯು ಅಕ್ಟೋಬರ್ 31, 2020 ರಂದು ಕೊನೆಗೊಂಡಿತು. ಹನ್ನೆರಡು ದಿನಗಳ ನಂತರ, ವಿನೋದ್ ಕುಮಾರ್ ಎರ್ನಾಕುಲಂನಲ್ಲಿ ROC ಯಲ್ಲಿ GBG ನಿಧಿ ಲಿಮಿಟೆಡ್ ಅನ್ನು ನೋಂದಾಯಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post