ಮಂಗಳೂರು, ನ.15: ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ 60-80 ಪರ್ಸೆಂಟ್ ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ, ವಿದ್ಯಾರ್ಥಿಗಳು ಆಡಳಿತ ಸೌಧ ಕಟ್ಟಡದ ಮುಂಭಾಗದ ಗಾಜನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಒಬ್ಬ ವಿದ್ಯಾರ್ಥಿಯ ಕೈಗೆ ಗಾಜು ತಾಗಿ ಗಾಯಗೊಂಡ ಘಟನೆಯೂ ನಡೆಯಿತು.
ಶುಕ್ರವಾರದಂದು ಬೆಳಿಗ್ಗೆಯೇ ವಿವಿಯ ಕ್ಯಾಂಪಸ್ ನಲ್ಲಿ ಸೇರಿದ್ದ ಎಬಿವಿಪಿ ನೇತೃತ್ವದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು ಬಳಿಕ ವಿಶ್ವವಿದ್ಯಾಲಯದ ಆಡಳಿತ ಸೌಧದ ಕಡೆಗೆ ಸಾಗಿ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾ ಕಾರರನ್ನು ತಡೆಯಲು ಬ್ಯಾರಿಕೇಡ್ ಹಾಕಿದ್ದು, ಇದನ್ನು ಕೆಳಹಾಕಿ ಮುನ್ನುಗಿದ್ದರು. ಬಳಿಕ ಪೊಲೀಸರು ಆಡಳಿತ ಸೌಧದ ಗಾಜಿನ ಬಾಗಿಲನ್ನು ಹಾಕಿದ್ದು ವಿದ್ಯಾರ್ಥಿಗಳು ತಳ್ಳಾಟ ನಡೆಸಿದಾಗ ಗಾಜು ಪುಡಿಪುಡಿಯಾಗಿ ಓರ್ವ ಪೋಲೀಸ್ ಹಾಗೂ ವಿದ್ಯಾರ್ಥಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.ಪೊಲೀಸರ ಬ್ಯಾರಿಕೇಡ್ ನಡುವೆಯೂ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ನುಗ್ಗಿ ಬಂದಿದ್ದು ಆಡಳಿತ ಸೌಧಕ್ಕೆ ಒಳನುಗ್ಗಲು ಯತ್ನಿಸಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು. ಪ್ರತಿಭಟನೆ ಮಾಡೋದು ವಿದ್ಯಾರ್ಥಿಗಳ ಹಕ್ಕು. ಹಾಗೆಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡೋದು, ಗಾಜು ಪುಡಿ ಮಾಡೋದು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಮಂಗಳೂರು ವಿವಿ ಕುಲಪತಿ ಸ್ಥಳಕ್ಕೆ ಆಗಮಿಸಿ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಆರ್ಥಿಕ ಸಂಕಷ್ಟದ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಡೀ ದಿನ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಬಳಿಕ ಸಿಂಡಿಕೇಟ್ ಸದಸ್ಯರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕುಲಪತಿಯವರು ನಾಳೆಯೇ ಈ ಬಗ್ಗೆ ಪರೀಶೀಲನೆ ನಡೆಸಲು ಕುಲಸಚಿವರನ್ನು ಕಳುಹಿಸಿಕೊಡುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಹಾಗೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post