ಶ್ರೀನಗರ, ನ 15: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳ ಮಾದರಿ ಸಂಗ್ರಹಿಸಿಟ್ಟಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಲ್ಲಿ ಕಾಣಿಸಿವೆ. ಗಾಯಗೊಂಡ ಪೊಲೀಸರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಮೃತಪಟ್ಟವರಲ್ಲಿ ಹೆಚ್ಚಿನವರು ಪೊಲೀಸ್ ಸಿಬ್ಬಂದಿ ಮತ್ತು ವಿಧಿವಿಜ್ಞಾನ ಅಧಿಕಾರಿಗಳಾಗಿದ್ದಾರೆ. ಶ್ರೀನಗರ ಸರ್ಕಾರದ ಇಬ್ಬರು ಅಧಿಕಾರಿಗಳು, ಓರ್ವ ನೈಬ್ ತಹಶೀಲ್ದಾರ್ ಕೂಡ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಸೇನೆಯ 92 ಬೇಸ್ ಆಸ್ಪತ್ರೆ ಮತ್ತು ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.
ಪೊಲೀಸ್ ಠಾಣೆಗೆ ಸ್ಫೋಟಕ ತಂದಿದ್ದೇಕೆ? : ಬಂಧಿತ ಉಗ್ರ, ವೈದ್ಯ ಮುಜಮ್ಮಿಲ್ ಗನೈ ಬಾಡಿಗೆ ಮನೆಯಿಂದ ವಶಪಡಿಸಿಕೊಂಡ 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳ ಪೈಕಿ ಒಂದಷ್ಟನ್ನು ಈಗಿನ ತನಿಖೆಯ ಅಂಗವಾಗಿ ಮಾದರಿಯಾಗಿ ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಿಂದಾಗಿಯೇ ಸ್ಫೋಟ ಸಂಭವಿಸಿದೆ. ಸದ್ಯ ಘಟನಾ ಸ್ಥಳದಿಂದ ಆರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಮೃತರನ್ನು ಗುರುತು ಪತ್ತೆ ಕಾರ್ಯ ಇನ್ನಷ್ಟೇ ಆಗಬೇಕಿದೆ. ಶವಗಳನ್ನು ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಕೊಂಡೊಯ್ಯಲಾಗಿದೆ.
ಉಗ್ರನ ಮನೆಯಿಂದ ವಶಪಡಿಸಿಕೊಂಡಿದ್ದ ಕೆಲವು ಸ್ಫೋಟಕಗಳನ್ನು ಪೊಲೀಸ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಂಗ್ರಹಿಸಲಾಗಿತ್ತು. 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳಲ್ಲಿ ಹೆಚ್ಚಿನದ್ದನ್ನು ಭಯೋತ್ಪಾದಕ ಘಟಕದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಅಕ್ಟೋಬರ್ ಮಧ್ಯದಲ್ಲಿ ನೌಗಾಮ್‌ನ ಬನ್‌ಪೋರಾದಲ್ಲಿ ಗೋಡೆಗಳ ಮೇಲೆ ಬೆದರಿಕೆ ಪೋಸ್ಟರ್‌ಗಳನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಪತ್ತೆ ಮಾಡಿದ ನಂತರ ಇಡೀ ಸಂಚು ಬಯಲಾಗಿತ್ತು. ಈ ಘಟನೆಯನ್ನು ದೇಶದ ಭದ್ರತೆಗೆ ಗಂಭೀರ ಬೆದರಿಕೆ ಎಂದು ಪರಿಗಣಿಸಿ, ಶ್ರೀನಗರ ಪೊಲೀಸರು ಅಕ್ಟೋಬರ್ 19 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ತಂಡವನ್ನು ರಚಿಸಿದ್ದರು. ತನಿಖೆ ನಡೆದು ಉಗ್ರರ ಬೃಹತ್ ಜಾಲವನ್ನು ಬೇಧಿಸಲಾಗಿತ್ತು. ಅದೇ ಸಂದರ್ಭದಲ್ಲೇ ದೆಹಲಿ ಸ್ಫೋಟವೂ ಸಂಭವಿಸಿತ್ತು.
Discover more from Coastal Times Kannada
Subscribe to get the latest posts sent to your email.







Discussion about this post