ಕಾರ್ಕಳ: ಶಂಕಿತ ನಕ್ಸಲ್ ಕಾರ್ಯಕರ್ತೆ ಶ್ರೀಮತಿ ಅಲಿಯಾಸ್ ಉನ್ನಿಮಾಯಿಳನ್ನು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಶ್ರೀಮತಿ ವಿರುದ್ಧ ಕಾರ್ಕಳದಲ್ಲಿ ಒಂದು ಪ್ರಕರಣವಿರುವುದರಿಂದ ಬಾಡಿ ವಾರೆಂಟ್ ಮೇಲೆ ಆಕೆಯನ್ನು ಕಾರ್ಕಳ ಪೊಲೀಸರು ಕೇರಳದಿಂದ ಕಾರ್ಕಳಕ್ಕೆ ಕರೆ ತಂದಿದ್ದಾರೆ. ಈಗಾಗಲೇ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿನಾಲೆ ಪ್ರದೇಶವೊಂದರಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಕರ್ನಾಟಕ ಮತ್ತು ಕೇರಳ ರಾಜ್ಯದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಕ್ಸಲ್ ನಾಯಕಿ ಮೂಲತಃ ಶೃಂಗೇರಿ ನಿವಾಸಿ ಶ್ರೀಮತಿ ಅಲಿಯಾಸ್ ಉನ್ನಿಮಾಯಾ(28) ಕಳೆದ ನವೆಂಬರ್ 7 ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದು. ನಂತರ ಈಕೆ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳುಈಕೆ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೆರೆಯಾಗಿದ್ದಳು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆ ನಿವಾಸಿಯಾಗಿರುವ ಶ್ರೀಮತಿ ಕೇರಳ-ಕರ್ನಾಟಕ ಗಡಿಭಾಗದಲ್ಲಿ ಆ್ಯಕ್ಟಿವ್ ಆಗಿದ್ದಳು. ಸದಾಶಿವ ಗೌಡ ಹತ್ಯೆ ನಡೆಸಿದ ಕಾರ್ಕಳ ವ್ಯಾಪ್ತಿಯ ಕಬ್ಬಿನಾಲೆಗೆ ಬಾಡಿ ವಾರೆಂಟ್ ಮೇಲೆ ಶ್ರೀಮತಿಯನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಶ್ರೀಮತಿ ಕರೆ ತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಶ್ರೀಮತಿ ಮೇಲೆ ರಾಜ್ಯದ ಹಲವು ಠಾಣೆಗಳಲ್ಲಿ 9 ಪ್ರಕರಣಗಳಿವೆ.
ಪ್ರಕರಣ ಹಿನ್ನೆಲೆ: 2011ರ ನ.19ರಂದು ಹೆಬ್ರಿಯ ಕಬ್ಬಿನಾಲೆ ಪ್ರದೇಶದಲ್ಲಿ ನಡೆದ ಸದಾಶಿವ ಗೌಡರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಶ್ರೀಮತಿ ಕೇರಳ ಹಾಗೂ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಆರೋಪದಲ್ಲಿ 2023 ನವೆಂಬರ್‌ನಲ್ಲಿ ವಯನಾಡು ಕಣ್ಣೂರಿನಲ್ಲಿ ಅರೆಸ್ಟ್ ಮಾಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಬೇಗಾರ್ ಗ್ರಾಪಂ ಬೆಳಗೋಡುಕೊಡಿಗೆಯ ಪುಟ್ಟುಗೌಡ, ಗಿರಿಜಾ ದಂಪತಿ ಪುತ್ರಿಯಾದ ಶ್ರೀಮತಿ 2007ರಿಂದ ನಾಪತ್ತೆಯಾಗಿದ್ದು ನಕ್ಸಲ್ ಚಟುವಟಿಕೆ ಯಲ್ಲಿ ಸಕ್ರಿಯಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನಿಕೋಡು ಚೆಕ್‌ಪೋಸ್ಟ್ ಅರಣ್ಯ ಇಲಾಖೆ ತಪಾಸಣೆ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಮತಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ.
ಘೋಷಣೆ ಕೂಗಿದ ಶ್ರೀಮತಿ: ಶ್ರೀಮತಿಯನ್ನು ಗುರುವಾರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರಿಪಡಿಸುವ ವೇಳೆ ಮಾಧ್ಯಮದವರನ್ನು ಕಂಡು ಸಿಪಿಐ ಮಾವೋ ಝಿಂದಾಬಾದ್ ಎಂದು ಘೋಷಣೆ ಕೂಗುತ್ತಾ ಜೈಕಾರ ಹಾಕಿದ್ದಾಳೆ. ಪೊಲೀಸ್ ಭದ್ರತೆಯ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post