ಮಂಗಳೂರು: ಪ್ರಜಾಸತ್ತಾತ್ಮಕ ಮೌಲ್ಯ ಎತ್ತಿ ಹಿಡಿಯುವ ಉದ್ದೇಶದಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಮೆರವಣಿಗೆಯನ್ನು ರದ್ದುಪಡಿಸಲಾಯಿತು. ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲು ನಂತರ ಪುರಭವನದಲ್ಲಿ ಸಮಾವೇಶ ನಡೆಸಲು ಸಿಎಫ್ಐ ಉದ್ದೇಶಿಸಿತ್ತು. ‘ಸಮಾವೇಶಕ್ಕೆ ಮಾತ್ರ ಅನುಮತಿ ನೀಡಿದ್ದೇವೆ. ಮೆರವಣಿಗೆಗೆ ಅನುನತಿ ನೀಡಿಲ್ಲ. ಹಾಗಾಗಿ ಮೆರವಣಿಗೆಯಲ್ಲಿ ಸಾಗಲು ಬಿಡುವುದಿಲ್ಲ’ ಎಂದು ನಗರ ಪೊಲೀಸರು ತಿಳಿಸಿದರು. ಇದಕ್ಕೊಪ್ಪದ ಸಿಎಫ್ಐ ಮುಖಂಡರು, ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಬಳಿಯಿಂದ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದರು. ಮಸ್ಜಿದ್ನೂರುನ್ನುಲ್ ಮಸೀದಿ ಬಳಿ ಸಾವಿರಾರು ಮಹಿಳಾ ಕಾರ್ಯಕರ್ತರು ಸೇರಿದ್ದರು. ಇದಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ.
ಸ್ಥಳಕ್ಕೆ ಬಂದ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಸಿಎಫ್ಐ ಮುಖಂಡರನ್ನು ಕರೆದು ಮಾತನಾಡಿಸಿದರು. ‘ನಗರದಲ್ಲಿ ಮೆರವಣಿಗೆ ನಡೆಸುವುದಕ್ಕೆ ಯಾವ ಸಂಘಟನೆಗೂ ಅವಕಾಶ ನೀಡುತ್ತಿಲ್ಲ. ನಿಮಗೆ ಪುರಭವನದಲ್ಲಿ ಸಮಾವೇಶ ನಡೆಸಲಷ್ಟೇ ಅನುಮತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು. ಬಳಿಕ ಸಿಎಫ್ಐ ಮುಖಂಡರು ಕಾರ್ಯಕರ್ತರನ್ನು ಬಸ್‌ಗಳಲ್ಲಿ ಪುರಭವನಕ್ಕೆ ಕಳುಹಿಸಿಕೊಟ್ಟರು. ಪುರಭವನದ ಎದುರು ಸಮಾವೇಶಗೊಂಡ ಕಾರ್ಯಕರ್ತರು ಘೋಷಣೆ ಕೂಗಿದರು. ಪ್ರಜಾಪ್ರಭುತ್ವ ರಕ್ಷಣೆಗೆ ನಾವು ಯಾವತ್ತು ಬದ್ಧ. ಹಿಜಾಬ್ ಮಹಿಳೆಯರ ಸ್ವಾಭಿಮಾನ. ನಮ್ಮ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ. ಮನುವಾದಿಗಳ ಕುತಂತ್ರ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು.
ಮಕ್ಕಳು ವಶಕ್ಕೆ: ಮೆರವಣಿಗೆಯಲ್ಲಿ ಭಾಗವಹಿಸಲು ಮೂವರು ಬಾಲಕರು ಸ್ಕೇಟಿಂಗ್ ಪರಿಕರಗಳನ್ನು ಧರಿಸಿ, ಸಿಎಫ್ಐ ಬಾವುಟ ಹೊದ್ದುಕೊಂಡು ಸಜ್ಜಾಗಿದ್ದರು. ಇದನ್ನು ಗಮನಿಸಿದ ಪೊಲೀಸ್‌ಕಮಿಷನರ್, ಮಕ್ಕಳನ್ನು ಮೆರವಣಿಗೆಗೆ ಕರೆತಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಮಕ್ಕಳನ್ನು ಒಪ್ಪಿಸುವಂತೆ ಸೂಚಿಸಿದರು. ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರು, ಮೆರವಣಿಗೆ ರದ್ದಾದ ಬಳಿಕ ಅವರನ್ನು ಬಿಟ್ಟು ಕಳುಹಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post