ಮಂಗಳೂರು, ಆ.15 : ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ದೋಚಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೊನೆಗೂ ಪ್ರಕರಣ ದಾಖಲಾಗಿದೆ. ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಹೆಸರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ಹತ್ತು ಕೋಟಿಗೂ ಹೆಚ್ಚು ಪೀಕಿಸಿದ್ದಾನೆಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಂಪನಿಯ ಪ್ರೊಪ್ರೈಟರ್ ಮೊಹಮ್ಮದ್ ಅಶ್ರಫ್ ಮತ್ತು ಮ್ಯಾನೇಜರ್ ಆಗಿದ್ದ ಹನೀಫ್ ಬಂಧಿತರು. ಇವರು ಬಜಪೆಯವರಾಗಿದ್ದು ನ್ಯೂ ಇಂಡಿಯಾ ರಾಯಲ್ ಹೆಸರಿನಲ್ಲಿ ಕಾಟಿಪಳ್ಳದಲ್ಲಿ ಕಚೇರಿ ತೆರೆದು ಲಕ್ಕಿ ಸ್ಕೀಮ್ ನಡೆಸುತ್ತಿದ್ದರು. ಸಂಸ್ಥೆಯ ಹೆಸರಿನಲ್ಲಿ ಪ್ರತಿ ತಿಂಗಳು ಒಂದು ಸಾವಿರ ಕಟ್ಟಿದರೆ ದುಬಾರಿ ಕಾರು, ಫ್ಲಾಟ್, ದ್ವಿಚಕ್ರ ವಾಹನ, ಬಂಗಾರದ ಸರ ಇನ್ನಿತರ ಗಿಫ್ಟ್ ಸಿಗುತ್ತೆ ಎಂದು ನಂಬಿಸುತ್ತಿದ್ದರು. ಏಜಂಟರ ಮೂಲಕ ಕಳೆದ ಐದಾರು ವರ್ಷಗಳಲ್ಲಿ 15ಕ್ಕೂ ಹೆಚ್ಚು ಸೀಸನ್ ನಡೆಸಿದ್ದು, ಈ ಬಾರಿಯ ಸೀಸನ್ ಕಳೆದ ಎಪ್ರಿಲ್ ತಿಂಗಳಿಗೆ ಮುಗಿದಿತ್ತು. 12 ತಿಂಗಳ ಡ್ರಾ ಫಲಿತಾಂಶದಲ್ಲಿ ಕೂಪನ್ ಗೆಲ್ಲದವರಿಗೆ ವರ್ಷದ ಕೊನೆಯಲ್ಲಿ ಬಡ್ಡಿ ಸಹಿತ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ ಈ ಬಾರಿ ಹಣ ಹಿಂತಿರುಗಿಸುವ ಬದಲು ಮೇ ತಿಂಗಳ ಕೊನೆಯಲ್ಲಿ ಕಾಟಿಪಳ್ಳದ ಕಚೇರಿಯನ್ನೇ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದರು.
ಇದರಿಂದ ಚಿಂತೆಗೆ ಒಳಗಾದ ಹಣ ಕಟ್ಟಿ ಸಂತ್ರಸ್ತರಾದವರು ಮೊಹಮ್ಮದ್ ಅಶ್ರಫ್ ಪತ್ತೆಗೆ ಮುಂದಾಗಿದ್ದರು. ಆದರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಶ್ರಫ್ ಪರಾರಿಯಾಗಿದ್ದ. ಜುಲೈ ತಿಂಗಳ ಆರಂಭದಲ್ಲಿ ಕಾಟಿಪಳ್ಳದ ನ್ಯೂ ಇಂಡಿಯಾ ಕಚೇರಿಗೂ ಮುತ್ತಿಗೆ ಹಾಕಿದ್ದರು. ಆದರೆ ಅಶ್ರಫ್ ನಿಗೂಢ ಜಾಗದಿಂದ ಎಲ್ಲರಿಗೂ ಹಣ ಹಿಂತಿರುಗಿಸುತ್ತೇನೆ ಎಂದು ವಿಡಿಯೋ ಮಾಡುತ್ತ ಕಾಲ ತಳ್ಳುತ್ತಿದ್ದ. ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಜನರು ಈ ಸ್ಕೀಮ್ ನಡಿ ಹಣ ಕಟ್ಟಿದ್ದರು ಎನ್ನಲಾಗುತ್ತಿದ್ದು, ಹಣ ಸಿಗುತ್ತೆ ಎಂಬ ಭರವಸೆಯಲ್ಲಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೇ ರೀತಿಯ ಮೋಸದ ಲಕ್ಕಿ ಸ್ಕೀಮ್ ಕಾಟಿಪಳ್ಳ, ಸುರತ್ಕಲ್, ಮಂಗಳೂರಿನಲ್ಲಿ ನಡೆಯುತ್ತಿರುವ ಬಗ್ಗೆ ವರದಿ ಮಾಡಿತ್ತು. ಈ ಸುದ್ದಿ ಭಾರೀ ವೈರಲ್ ಆಗಿದ್ದು, ಸಂತ್ರಸ್ತರನ್ನು ಪೊಲೀಸ್ ಠಾಣೆ ಹತ್ತುವಂತೆ ಪ್ರೇರೇಪಿಸಿತ್ತು. ಇದೀಗ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ನ್ಯೂ ಇಂಡಿಯಾ ರಾಯಲ್ ಹೆಸರಲ್ಲಿ ಹಣ ಕಟ್ಟಿ ಮೋಸ ಹೋಗಿರುವ ಭುಜಂಗ ಪೂಜಾರಿ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಒಂದು ವರ್ಷದಿಂದ ಹಣ ಕಟ್ಟಿದ್ದು ಎಪ್ರಿಲ್ ವೇಳೆಗೆ ಹಣ ಕೇಳಿದಾಗ ನೆಪ ಹೇಳಿಕೊಂಡು ಬಂದಿದ್ದರು. ಈಗ ಕಚೇರಿ ಬಂದ್ ಮಾಡಿ ನಾಪತ್ತೆಯಾಗಿದ್ದಾರೆ. ಇದೇ ರೀತಿ ಹತ್ತು ಸಾವಿರಕ್ಕು ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದು ಹತ್ತು ಕೋಟಿಗೂ ಹೆಚ್ಚು ವಂಚನೆ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ಸುರತ್ಕಲ್ ಠಾಣೆಯಲ್ಲಿ ವಿಚಾರಿಸಿದಾಗ, ಸ್ಕೀಮ್ ಹೆಸರಲ್ಲಿ ಹಣ ಕಟ್ಟಿ ಮೋಸ ಹೋದವರು ತುಂಬ ಮಂದಿಯಿದ್ದು, ಒಬ್ಬೊಬ್ಬರೇ ದೂರು ನೀಡಲು ಬರುತ್ತಿದ್ದಾರೆ. ಸೂಕ್ತ ಲೈಸನ್ಸ್ ಇಲ್ಲದೆ ಹಣ ಸಂಗ್ರಹಿಸಿ ಜನರನ್ನು ಮೋಸ ಮಾಡಿದ್ದಕ್ಕಾಗಿ ಬರ್ಸ್ಟ್ ಏಕ್ಟ್ ನಡಿ ಕೇಸು ದಾಖಲಿಸಿದ್ದೇವೆ. ಇಬ್ಬರಿಂದಲೂ ಹಣ ಕಕ್ಕಿಸಿ ಸಂತ್ರಸ್ತರಿಗೆ ಹಿಂತಿರುಗಿಸುವ ಯತ್ನ ಮಾಡುತ್ತೇವೆ ಎಂದಿದ್ದಾರೆ. ಇಂತಹ ಹಲವಾರು ಸ್ಕೀಮ್ ಗಳಿದ್ದು, ಎಲ್ಲರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ.
ಕೆಲವರ ಮಾಹಿತಿ ಪ್ರಕಾರ, ಮೊಹಮ್ಮದ್ ಅಶ್ರಫ್ ಕಳೆದು ಐದಾರು ವರ್ಷಗಳಲ್ಲಿ ಈ ರೀತಿಯ ನಕಲಿ ಸ್ಕೀಮ್ ನಡೆಸುತ್ತಿದ್ದು 15 ಸೀಸನ್ ಮಾಡಿದ್ದಾನೆ. ಅಂದಾಜು 30 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಮೋಸ ಮಾಡಿದ್ದಾನೆಂದು ಹೇಳುತ್ತಿದ್ದಾರೆ. ಆದರೆ ದೂರುದಾರರು ಮುಂದೆ ಬಾರದೇ ಇದ್ದರೆ ವಸೂಲಾತಿ ಕಷ್ಟ. ಹಣ ಕಳಕೊಂಡು ಮೋಸ ಹೋದವರು ದೂರು ನೀಡಬೇಕು ಎಂದು ಪೊಲೀಸರು ಹೇಳುತ್ತಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನಕ್ಕೆ ಕಸ್ಟಡಿಗೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post