ಮಂಗಳೂರು: ಕೇರಳದಲ್ಲಿ ಚಿನ್ನದ ಮಳಿಗೆ ಹೊಂದಿರುವ ವ್ಯಾಪಾರಿ ಶ್ರೀಹರಿ ಎಂಬವರನ್ನು ನಗರದಲ್ಲಿ ತಂಡವೊಂದು ಕಾರಿನಲ್ಲಿ ಅಪಹರಣಗೈದು 350 ಗ್ರಾಂ ಚಿನ್ನವನ್ನು ದರೋಡೆಗೈದ ಘಟನೆ ಬುಧವಾರ ನಡೆದಿದೆ.
ಶ್ರೀಹರಿ ಅವರು ಆ.13ರಂದು ಬೆಳಗ್ಗೆ 7ಕ್ಕೆ 350 ಗ್ರಾಂ ಚಿನ್ನದ ಗಟ್ಟಿಯನ್ನು ಹಿಡಿದುಕೊಂಡು ರೈಲಿನ ಮೂಲಕ ಕೇರಳದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಹೊರಬಂದು ರಿಕ್ಷಾಕ್ಕೆ ಕಾಯುತ್ತಿದ್ದಾಗ ಇನೋವಾ ಕಾರಿನಲ್ಲಿ ಬಂದ ತಂಡವು “ನಾವು ಕಸ್ಟಮ್ಸ್ ಅಧಿಕಾರಿಗಳು, ನಿಮ್ಮನ್ನು ಪರಿಶೀಲನೆ ಮಾಡಲು ಬಂದಿದ್ದೇವೆ. ಕಾರಿನಲ್ಲಿ ಕುಳಿತುಕೊಳ್ಳಿ” ಎಂದು ಗದರಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಚಿನ್ನದ ವ್ಯಾಪಾರಿ ಒಪ್ಪದಿದ್ದಾಗ ಬಲವಂತವಾಗಿ ಕಾರಿನೊಳಗೆ ತಳ್ಳಿ ಅಪಹರಿಸಿದ್ದಾರೆ. ಬಳಿಕ ಉಡುಪಿ ಮೂಲಕ ಕುಮಟಾ ಶಿರಸಿಗೆ ಕರೆದುಕೊಂಡು ಹೋಗಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನದ ಗಟ್ಟಿಯನ್ನು ದರೋಡೆಗೈದಿದ್ದಾರೆ. ನಂತರ ಚಿನ್ನದ ವ್ಯಾಪಾರಿಯನ್ನು ಶಿರಸಿ ಅಂತ್ರವಳ್ಳಿ ಎಂಬ ಊರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಚಿನ್ನದ ವ್ಯಾಪಾರಿ ಬಳಿಕ ಮಂಗಳೂರಿಗೆ ಬಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿನ್ನದ ವ್ಯಾಪಾರಿ ದರೋಡೆಗೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಪಾಂಡೇಶ್ವರ ಪೊಲೀಸರಿಗೆ ಆರೋಪಿಗಳ ಬಗ್ಗೆ ಬಲವಾದ ಸಾಕ್ಷ್ಯ ಲಭಿಸಿದ್ದು, ತಂಡವನ್ನು ಬಲೆಗೆ ಕೆಡಹುವ ಸಾಧ್ಯತೆಯಿದೆ. ಶ್ರೀಹರಿ ಅವರ ಚಲನಚಲನದ ಬಗ್ಗೆ ಗೊತ್ತಿರುವ ವ್ಯಕ್ತಿಗಳೇ ಈ ದರೋಡೆ ನಡೆಸಿರುವ ಸಾಧ್ಯತೆಯಿದ್ದು ಪೊಲೀಸರು ಸಿಸಿಟಿವಿ ಇನ್ನಿತರ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post