ಮಂಗಳೂರು, ಆಗಸ್ಟ್ 16: ಒಂದೆಡೆ ಧರ್ಮಸ್ಥಳದ ವಿವಿಧ ಕಡೆಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ ಹೇಳಿರುವ ಅನಾಮಿಕನ ದೂರಿನ ಮೇರೆಗೆ ಎಸ್ಐಟಿ ತನಿಖೆ ಪ್ರಗತಿಯಲ್ಲಿದೆ. ಉತ್ಖನನವೂ ನಡೆಯುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳ ಪರಿಸರದಲ್ಲಿ ಶವಗಳನ್ನು ಹೂಳಲಾಗಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. 1987 ರಿಂದ 2025 ರ ಅವಧಿಯಲ್ಲಿ ಧರ್ಮಸ್ಥಳ ಆಸುಪಾಸಿನಲ್ಲಿ ಶಿಶುಗಳದ್ದೂ ಸೇರಿದಂತೆ 279 ಶವಗಳನ್ನು ಹೂಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳು ಎಂದು ಆರ್‌ಟಿಐ ಅಡಿ ಪಡೆಯಲಾದ ಮಾಹಿತಿಯಿಂದ ತಿಳಿದುಬಂದಿದೆ.
ಧರ್ಮಸ್ಥಳ ಆಸುಪಾಸಿನಲ್ಲಿ ಹೂಳಲಾದ 279 ಅನಾಥ ಶವಗಳಲ್ಲಿ 219 ಪುರುಷರ ಶವಗಳು ಮತ್ತು 46 ಮಹಿಳೆಯರ ಶವಗಳಾಗಿವೆ. ಶಿಶುಗಳದ್ದು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಧರ್ಮಸ್ಥಳ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಅವರಿಂದ ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
2003-2004, 2006-2007 ಮತ್ತು 2014-2015ರ ಅವಧಿಯಲ್ಲಿ 17 ಅನಾಥ ಶವಗಳನ್ನು ಹೂಳಲಾಗಿದೆ. ಕಳೆದ 10 ವರ್ಷಗಳಿಂದ 101 ಅನಾಥ ಶವಗಳನ್ನು ಹೂಳಲಾಗಿದೆ. ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ವೈದ್ಯರೊಬ್ಬರು, ಅನಾಥ ಶವಗಳಲ್ಲಿ ಹೆಚ್ಚಿನವು ಕಾಡಿನೊಳಗೆ ಪತ್ತೆಯಾಗಿದ್ದವು ಎಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಹೆಚ್ಚಿನ ಸಾವುಗಳು ಆತ್ಮಹತ್ಯೆಯಿಂದಾಗಿ ಸಂಭವಿಸಿವೆ ಎಂಬುದು ಆರ್‌ಟಿಐ ಅರ್ಜಿ ಅಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ. ಮೃತದೇಹಗಳು ಕೊಳೆತು ದುರ್ವಾಸನೆ ಬರುತ್ತಿರುವ ಸ್ಥಿತಿಯಲ್ಲಿದ್ದುದರಿಂದ ಅವುಗಳನ್ನು ಅಲ್ಲಲ್ಲೇ ಹೂಳಲಾಗಿತ್ತು ಎಂಬ ಮಾಹಿತಿ ದೊರೆತಿದೆ.
ಸದ್ಯ ಎಸ್ಐಟಿ ತನಿಖೆ ಪ್ರಗತಿಯಲ್ಲಿದ್ದು, ಕಳೆದ ಕೆಲವು ದಿನಗಳಿಂದ ಉತ್ಖನನ ನಡೆಯುತ್ತಿದೆ. ಇಂದು ಶೋಧ ಕಾರ್ಯಾಚರಣೆ ನಡೆಸದಿರಲು ಎಸ್ಐಟಿ ನಿರ್ಧರಿಸಿದೆ. ದೂರುದಾರ ಅನಾಮಿಕ ವ್ಯಕ್ತಿ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲೇ ಇದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆತ ನ್ಯಾಯಾಲಯಕ್ಕೆ ತಂದಿದ್ದ ಬುರುಡೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೂಕ್ತ ಮಾಹಿತಿ ದೊರಕಿದಲ್ಲಿ ಇಂದು ಸ್ಥಳ ಮಹಜರು ಸಾಧ್ಯತೆ ಇದೆ. ಏತನ್ಮಧ್ಯೆ, ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಅನಾಮಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ.
ಮತ್ತೊಂದೆಡೆ, ಪ್ರಕರಣವು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದ್ದು, ಬಿಜೆಪಿಯು ‘ಧರ್ಮಸ್ಥಳ ಚಲೋ’ ಯಾತ್ರೆಯನ್ನು ಹಮ್ಮಿಕೊಂಡಿದೆ. ತನಿಖೆ ಹೆಸರಿನಲ್ಲಿ ವೃಥಾ ವಿಳಂಬ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಬಾರದು ಎಂದು ಬಿಜೆಪಿ ಆಗ್ರಹಿಸಿದೆ.
ಸದ್ಯಕ್ಕೆ, ಪ್ರಕರಣ ಸಂಬಂಧಿಸಿದಂತೆ ನಡೆಯುತ್ತಿರುವ ಶವ ಶೋಧ ಕಾರ್ಯಾಚರಣೆಗೆ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ವಿರಾಮ ನೀಡಲಾಗಿತ್ತು. ಶನಿವಾರ, ಭಾನುವಾರವೂ ಶೋಧ ಕಾರ್ಯ ನಡೆಯುವ ಸಾಧ್ಯತೆ ಇಲ್ಲ. ಎಸ್‌ಐಟಿ ತನಿಖಾ ತಂಡದಿಂದ ಜು.28ರಂದು ಶೋಧ ಕಾರ್ಯ ಆರಂಭಿಸಿದ್ದು ರಜಾ ದಿನಗಳನ್ನು ಹೊರತುಪಡಿಸಿ 15 ದಿನಗಳಲ್ಲಿ 17 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ವಿಪಕ್ಷಗಳ ಆಗ್ರಹ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ಸದನದಲ್ಲಿ ಪ್ರಕರಣದ ಕುರಿತು ಉತ್ತರ ನೀಡಲಿದ್ದಾರೆ ಎನ್ನಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post