ಕಲಬುರಗಿ: ಹೆಣ್ಣು ಭ್ರೂಣ ಪತ್ತೆ ನಿಷೇಧವಿದ್ದರೂ ಕೂಡ ಜಿಲ್ಲೆಯಲ್ಲಿ ಈ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಗರ್ಭಿಣಿಯರನ್ನು ಕರ್ನಾಟಕಕ್ಕೆ ಕರೆಯಿಸಿ ಭ್ರೂಣ ಲಿಂಗ ಪತ್ತೆ ದಂಧೆ ಕಂಡುಬಂದಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಆರೋಗ್ಯ ಇಲಾಖೆ ಅಧಿಕಾರಿಗಳು ಸಿನಿಮೀಯ ರೀತಿಯ ಜಂಟಿ ಕಾರ್ಯಚರಣೆ ನಡೆಸಿ ದಂಧೆ ಬಯಲಿಗೆಳೆದಿದ್ದಾರೆ. ಮಹಾರಾಷ್ಟ್ರ ಗಡಿಭಾಗವಾಗಿರುವ ಕಲಬುರಗಿಯ ಸಂತ್ರಸ್ವಾಡಿಯ ಮನೆಯೊಂದರಲ್ಲಿ ಅಕ್ರಮ ನಡೆಯುತ್ತಿತ್ತು. ಆಯುಷ್ ವೈದ್ಯ ಡಾ.ಗುರುರಾಜ ಕುಲಕರ್ಣಿ ಎಂಬಾತ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ. ಏಜೆಂಟ್‌ಗಳ ಮೂಲಕ ಮಹಾರಾಷ್ಟ್ರದ ಗರ್ಭಿಣಿಯರನ್ನು ಕಲಬುರಗಿಗೆ ಕರೆಯಿಸಿ ಸ್ಕ್ಯಾನಿಂಗ್ ಮಾಡಿಸಿ, ಹಣ ಪಡೆಯುತ್ತಿದ್ದ. ಕೃತ್ಯಕ್ಕೆ ಆಳಂದ ತಾಲೂಕಿನ ಸುರೇಶ್ ತಡೋಳ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಸ್ಕ್ಯಾನಿಂಗ್ ಬಳಿಕ ತಮಗೆ ಹೆಣ್ಣುಮಗು ಇರುವುದು ಗೊತ್ತಾದರೆ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದರು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ.
ದಂಧೆ ಬಗ್ಗೆ ಮಾಹಿತಿ ಅರಿತ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕಲಬುರಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಮೊದಲಿಗೆ ಮಹಾರಾಷ್ಟ್ರದ ಗರ್ಭಿಣಿಯೊಬ್ಬರ ಮುಖಾಂತರ ಮಧ್ಯವರ್ತಿ ಸುರೇಶ್ ತಡೋಳನನ್ನು ಸಂಪರ್ಕಿಸಲಾಗಿದೆ. ಪ್ಲ್ಯಾನ್ ಪ್ರಕಾರ ಮಹಿಳೆಯನ್ನು ಮುಂದೆಬಿಟ್ಟು ಪೊಲೀಸ್ ಸಿಬ್ಬಂದಿ ಜೊತೆಗೆ ಅಧಿಕಾರಿಗಳು ಹಿಂಬಾಲಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಲಬುರಗಿಯ ಎಸ್ಟಿ ಬಿಟಿ ಬಳಿ ಬರುವಂತೆ ಮಧ್ಯವರ್ತಿ ಹೇಳಿದ್ದ. ಅಲ್ಲಿಗೆ ಮಹಿಳೆ ಬಂದಾಗ ಡಾ.ಗುರುರಾಜ ಕುಲಕರ್ಣಿ ತಾನು ಹೊರಗೆ ಬಂದಿದ್ದು, ಮಧ್ಯಾಹ್ನ 2 ಗಂಟೆಗೆ ಬನ್ನಿ ಅಂತ ಹೇಳಿದ್ದಾರೆ. ಬಳಿಕ 2 ಗಂಟೆವರೆಗೆ ಕಾಯುತ್ತಿದ್ದ ಅಧಿಕಾರಿಗಳು ವೈದ್ಯ ಆಗಮಿಸಿ ಸ್ಕ್ಯಾನ್ ಮಾಡುತ್ತಿರುವಾಗಲೇ ದಾಳಿ ನಡೆಸಿದ್ದಾರೆ. ತಾನು ಅಕ್ರಮ ಎಸಗಿರುವುದನ್ನು ಡಾ. ಗುರುರಾಜ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದರು.
ದಾಳಿ ವೇಳೆ ಟೆಸ್ಟ್ ಒಂದು ಮೊಬೈಲ್ ಸ್ಕ್ಯಾನಿಂಗ್ ಮಷಿನ್ ಸೇರಿ ಭ್ರೂಣ ಪತ್ತೆಗೆ ಬಳಸುವ ಸಾಧನಗಳು ದೊರೆತಿವೆ. 2014ರಲ್ಲಿ ಮೊಬೈಲ್ ಸ್ಕ್ಯಾನಿಂಗ್ ಮಷಿನ್ ಲೈಸನ್ಸ್ ಪಡೆದಿದ್ದು, ರೋಗಿ ಬಳಿ ಹೋಗಿ ಟೆಸ್ಟ್ ಮಾಡುತ್ತಿದ್ದ. ಸದ್ಯ ಇದಕ್ಕೆ ನಿಷೇಧವಿದೆ. ಆದರೂ ಕೂಡ ಮಧ್ಯವರ್ತಿ ಸುರೇಶ್ ಜೊತೆ ಸೇರಿ ಅಕ್ರಮ ದಂಧೆಯಲ್ಲಿ ತೊಡಗಿದ್ದ. ಒಂದು ಟೆಸ್ಟ್ಗೆ 5ರಿಂದ 10 ಸಾವಿರ ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ ಎಂದರು. ಸದ್ಯ ಆರೋಗ್ಯ ಅಧಿಕಾರಿಗಳು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪಂಚನಾಮೆ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ನ್ಯಾಯಾಧೀಶರು ಸಂಬಂಧಿತ ಬ್ರಹ್ಮಪುರ ಠಾಣೆಗೆ ಪ್ರಕರಣ ವರ್ಗಾಯಿಸಿ ಹೆಚ್ಚಿನ ತನಿಖೆಗೆ ಸೂಚಿಸಿದ್ದಾರೆ ಎಂದು ರಾಜಶೇಖರ ಮಾಲಿ ತಿಳಿಸಿದ್ದಾರೆ. ದಂಧೆ ಆರೋಪಿ ಆಯುಷ್ ವೈದ್ಯ ಡಾ.ಗುರುರಾಜ ಕುಲಕರ್ಣಿ ಕೇವಲ ಸ್ಕ್ಯಾನಿಂಗ್ ಮಾಡಿ ಲಿಂಗ ಮಾತ್ರ ಹೇಳುತ್ತಿದ್ದರಾ ಅಥವಾ ಗರ್ಭಪಾತವನ್ನೂ ಮಾಡಿಸುತ್ತಿದ್ದರಾ? ಎಂಬ ಪ್ರಶ್ನೆಗಳೂ ಕೇಳಿಬಂದಿವೆ. ಈ ಬಗ್ಗೆ ತನಿಖೆಯಿಂದ ಸಂಪೂರ್ಣ ಮಾಹಿತಿ ಬಹಿರಂಗವಾಗಬೇಕಿದೆ.
Discover more from Coastal Times Kannada
Subscribe to get the latest posts sent to your email.
Discussion about this post