ಮಂಗಳೂರು: ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಕೇಂದ್ರ, ರಾಜ್ಯ ಸರಕಾರ ಸೇರಿದಂತೆ ವಿವಿಧ ಮೂಲಗಳಿಂದ 4,750ಕೋಟಿ ರೂ. ಅನುದಾನ ದೊರಕಿದೆೆ ಎಂದು ಶಾಸಕ ಡಿ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಮಗಾರಿಗಳನ್ನು 2023ರ ಮಾರ್ಚ್ ಒಳಗೆ ಪೂರ್ಣಗೊಳಿಸುವ ಇರಾದೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮೂರು ವರ್ಷ ಮಳೆಗಾಲದಲ್ಲಿ ಉಂಟಾದ ಪ್ರವಾಹಗಳು, ಎರಡು ವರ್ಷ ಕೋವಿಡ್ ಕಾರಣದಿಂದ ಕಾಮಗಾರಿಗಳು ವಿಳಂಬವಾಗಿರುವುದು ನಿಜ’ ಎಂದು ಒಪ್ಪಿಕೊಂಡರು.
‘ಒಳಗೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್‌ಸಿಎಲ್), ಪಾಲಿಕೆ ಹಾಗೂ ಸರ್ಕಾರದ ಅನುದಾನದ ಕಾಮಗಾರಿಗಳೆಲ್ಲವೂ 2025ರ ಮಾರ್ಚ್ ಒಳಗೆ ಪೂರ್ಣಗೊಂಡು, ನಗರದ ಸಮಗ್ರ ಚಿತ್ರಣವೇ ಬದಲಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಜಲಸಿರಿ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ. ಪ್ರಸ್ತುತ ತುಂಬೆಯಿಂದ ನಗರಕ್ಕೆ ಪೂರೈಕೆಯಾಗುವ ನೀರಿನಲ್ಲಿ ಶೇ 40ರಿಂದ ಶೇ 50ರಷ್ಟು ಸೋರಿಕೆ ಆಗುತ್ತಿದೆ. ಅದನ್ನು ಪತ್ತೆ ಹಚ್ಚಲೂ ಸಾಧ್ಯವಾಗುತ್ತಿಲ್ಲ. ಜಲಸಿರಿ ಯೋಜನೆಯಡಿ ನಗರದಲ್ಲಿ ಕುಡಿಯುವ ನೀರು ಪೂರೈಕೆಯ ಎಲ್ಲ ಕೊಳವೆಗಳನ್ನು ಬದಲಾಯಿಸುತ್ತಿದ್ದೇವೆ. ಈ ಯೋಜನೆ ಪೂರ್ಣಗೊಂಡ ಬಳಿಕ ನೀರು ಸೋರಿಕೆ ಪ್ರಮಾಣ ಶೇ 8ಕ್ಕಿಂತ ಕಡಿಮೆ ಇರಲಿದೆ’ ಎಂದು ಭರವಸೆ ನೀಡಿದರು.
‘ಜಲಸಾರಿಗೆ ಮಂಡಳಿಯ (ಮೆರಿಟೈಮ್ ಬೋರ್ಡ್) ಮೂಲಕ ಮೀನುಗಾರಿಕಾ ಬಂದರಿನ ಧಕ್ಕೆಯ ಮೂರನೇ ಹಂತದ ಅಭಿವೃದ್ಧಿಗೆ ರೂ. 49 ಕೋಟಿ ಅನುದಾನ ಬಿಡುಗಡೆಯಾಗಿದೆ. 7 ಮೀ ಆಳದವರೆಗೆ ಹೂಳೆತ್ತುವ ಕಾಮಗಾರಿಯನ್ನು ರೂ. 29 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಭಾರಿ ಗಾತ್ರದ ಹಡಗುಗಳೂ ಮೀನುಗಾರಿಕಾ ಬಂದರಿಗೆ ಬರುವುದಕ್ಕೆ ಅವಕಾಶ ಸಿಗಲಿದೆ’ ಎಂದರು.
‘ಎರಡು ಕುದ್ರುಗಳನ್ನು (ದ್ವೀಪ) ರೂ. 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೊಯ್ಗೆಬಜರ್‌ನಿಂದ ನೇತ್ರಾವತಿ ನದಿಯಲ್ಲಿ ಸಾಗಿ ಕೂಳೂರುವರೆಗೆ ತಲುಪುವ ಬಾರ್ಜ್ ಪ್ರಯಾಣ ಆರಂಭಿಸಲಿದ್ದೇವೆ. ಇದರಿಂದ ಜನರ ಓಡಾಟ ಮತ್ತು ವಾಹನಗಳ ಸಾಗಾಟಕ್ಕೂ ಅವಕಾಶ ಸಿಗಲಿದೆ. ಈ ಜಲಮಾರ್ಗದಲ್ಲಿ ಬೋಟ್ ನಿಲುಗಡೆಗಾಗಿ ಐದು ಕಡೆ ಸಣ್ಣ ಜೆಟ್ಟಿಗಳನ್ನು ನಿರ್ಮಿಸಲಾಗುತ್ತದೆ’ ಎಂದರು.
8 ವಾರ್ಡ್‌ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ: ಮಂಗಳೂರು ಮಹಾನಗರ ಪಾಲಿಕೆಯ 8 ವಾರ್ಡ್‌ಗಳಿಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸೀಮಿತಗೊಳಿಸಲಾಗಿದೆ. 1 ಸಾವಿರ ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಅಂತರ್‌ರಾಷ್ಟ್ರೀಯ ಈಜುಕೊಳ, ಅಂತರ್ ರಾಷ್ಟ್ರೀಯ ಕ್ರೀಡಾ ಸಂಕೀರ್ಣ, ಮಂಗಳಾ ಸ್ಟೇಡಿಯಂ ಉನ್ನತೀಕರಣ, ನದಿ ಮುಂಭಾಗ ಯೋಜನೆ, ಸುಲ್ತಾನ್ ಬ್ಯಾಟರಿಯಲ್ಲಿ ತೂಗು ಸೇತುವೆ, ಕುದ್ರು ಅಭಿವೃದ್ಧಿ, ಪಂಪ್‌ವೆಲ್-ಪಡೀಲ್ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದ.ಕ.ಜಿಲ್ಲಾ ಕಾರ್ಯನಿರತ ಪ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post