ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಪೂರ್ಣ ಗುಣಮುಖರಾಗದ ಅವರು ಎಲ್ಲದಕ್ಕೂ ಮನೆಯವರನ್ನೇ ಅವಲಂಬಿತರಾಗಿದ್ದಾರೆ. ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಹೊಸ ಆಟೊ ರಿಕ್ಷಾ ಮತ್ತು 5 ಲಕ್ಷ ರೂ.ವನ್ನು ಕೆಲವೇ ದಿನದೊಳಗೆ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಪುರುಷೋತ್ತಮ ಪೂಜಾರಿಯ ಮನೆಗೆ ಮಂಗಳವಾರ ಭೇಟಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮಗಾರರೊಂದಿಗೆ ಮಾತನಾಡಿದರು.
ವೈಯಕ್ತಿಕ ನೆಲೆಯಲ್ಲಿ ತಾನು ಹೊಸ ಆಟೊ ರಿಕ್ಷಾ ನೀಡುತ್ತೇನೆ. ಪುರುಷೋತ್ತಮರ ಬಳಿಯಿರುವ ಹಳೆಯ ಪರ್ಮಿಟ್‌ನ ಆಧಾರದಲ್ಲಿ ಹೊಸ ಆಟೊ ರಿಕ್ಷಾಕ್ಕೆ ಪರ್ಮಿಟ್ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಟೋರಿಕ್ಷಾ ನೀಡುವಾಗ ಬಿಜೆಪಿ ವತಿಯಿಂದ 5 ಲ.ರೂ.ವನ್ನು ನೀಡಲಾಗುವುದು ಎಂದು ವೇದವ್ಯಾಸ ಕಾಮತ್ ಹೇಳಿದರು.
ಸರಕಾರದಿಂದ ದೊರೆಯುವ ಪರಿಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಮುಖ್ಯಮಂತ್ರಿಯ ಗಮನ ಸೆಳೆದಿದ್ದಾರೆ. ಹಾಗಾಗಿ ಆ ಪರಿಹಾರ ಕೂಡ ಶೀಘ್ರ ಬಿಡುಗಡೆಯಾಗಲಿದೆ. ಚಿಕಿತ್ಸಾ ವೆಚ್ಚ ಭರಿಸುವುದು ಬೇಡ ಎಂದಿದ್ದೆವು. ಪುರುಷೋತ್ತಮ ಪೂಜಾರಿಯ ಪುತ್ರಿಗೆ ಇಎಸ್‌ಐ ವ್ಯವಸ್ಥೆಯಿರುವ ಕಾರಣ ಆ ಮೂಲಕ ಪಾವತಿಸಲಾಗಿದೆ ಎಂದರು.
ಈ ಸಂದರ್ಭ ಕಾರ್ಪೊರೇಟರ್ ಸಂದೀಪ್ ಗರೋಡಿ, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಿಜೆಪಿಯ ಮುಖಂಡರಾದ ಮನೋಜ್ ಕುಮಾರ್, ದಯಾನಂದ ಮುಗುಳ್ಯ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post